ಶ್ರೀಗಂಧ, ಸೇಬು ಕೃಷಿ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿರುವ ರೈತರು ಬಹಳ ಮಂದಿ ಇದ್ದಾರೆ. ಆದ್ರೆ ಮಹಾರಾಷ್ಟ್ರದ ಪುಣೆ (Pune) ಜಿಲ್ಲೆಯ 36 ವರ್ಷದ ರೈತ ಈಶ್ವರ್ ಗಾಯ್ಕರ್ (Ishwar Gaykar) ಟೊಮೆಟೋ ಬೆಳೆದು ಕೇವಲ ಒಂದೇ ತಿಂಗಳಿನಲ್ಲಿ ಕೋಟ್ಯಧಿಪತಿಯಾಗಿದ್ದಾರೆ.
ಹೌದು. ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಟೊಮೆಟೋ (Tomato Crop) ಬೆಳೆ ಏರಿಕೆಯಾಗಿದ್ದು, ಬೇಡಿಕೆಯೂ ಸಹ ಹೆಚ್ಚಾಗಿದೆ. ಬೆಲೆ ಇಲ್ಲದಿದ್ದಾಗ ರಸ್ತೆಯಲ್ಲಿ ಸುರಿದು ಹೋಗುತ್ತಿದ್ದ ರೈತರಿಗೆ ಇದು ವರದಾನವಾಗಿದೆ. ಇತ್ತೀಚೆಗೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ಯುವ ರೈತನೊಬ್ಬ ಕೇವಲ 20 ಗುಂಟೆಯಲ್ಲಿ ಟೊಮೆಟೋ ಬೆಳೆದು 11 ಲಕ್ಷ ರೂ. ಆದಾಯ ತೆಗೆದಿದ್ದ ಉದಾಹರಣೆ ಕಣ್ಣ ಮುಂದೆಯೇ ಇದೆ.
ಗಾಯ್ಕರ್ ಸಹ ಕೇವಲ ಒಂದು ತಿಂಗಳಲ್ಲಿ 17,000 ಕ್ರೇಟ್ ಟೊಮೆಟೋ ಮಾರಾಟ ಮಾಡಿ ಬರೋಬ್ಬರಿ 2.8 ಕೋಟಿ ರೂ. ಆದಾಯ ಗಳಿಸಿದ್ದಾರೆ. ಅವರ ಜಮೀನಿನಲ್ಲಿ ಮುಂದಿನ ಒಂದೆರಡು ದಿನಗಳಲ್ಲೇ ಇನ್ನೂ 4,000 ಕ್ರೇಟ್‌ನಷ್ಟು ಟೊಮೆಟೋ ಕಟಾವಿಗೆ ಬರಲಿದೆ. ಬೆಲೆ ಏರಿಕೆ ಹೀಗೆ ಮುಂದುವರಿದರೆ ಗಾಯ್ಕರ್ ಆದಾಯ 3.5 ಕೋಟಿಗೆ ತಲುಪಿಲಿದೆ ಎಂದು ಹೇಳಲಾಗಿದೆ.
ಭಾನುವಾರ ಉತ್ತರ ಪ್ರದೇಶದ (Uttar Pradesh) ಹಾಪುರ್‌ನಲ್ಲಂತೂ ಕೆ.ಜಿ ಟೊಮೆಟೋ ದಾಖಲೆಯ 250 ರೂ.ಗೆ ಮಾರಾಟವಾಗಿದೆ. ಗಗನಕ್ಕೇರುತ್ತಿರುವ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೆ.ಜಿಗೆ 80 ರೂ. ನಂತೆ ದೇಶದ ಆಯ್ದ 500 ಕಡೆಗಳಲ್ಲಿ ಮಾರಾಟ ಮಾಡಲು ಕ್ರಮ ಕೈಗೊಂಡಿದೆ. ಈ ನಡುವೆ ಹಲವು ರೈತರು ಈ ಅವಧಿಯಲ್ಲಿ ಲಕ್ಷಾಧಿಪತಿಗಳಾಗಿರುವುದು ಸಂತಸ ತಂದಿದೆ.
ಈ ಸಂತಸವನ್ನು ಹಂಚಿಕೊಂಡಿರುವ ಗಾಯ್ಕರ್, ನಮ್ಮ ಕುಟುಂಬದ ಬಳಿ 18 ಎಕರೆ ಜಮೀನು ಇದೆ. ಅದರಲ್ಲಿ 12 ಎಕರೆಯಲ್ಲಿ ನಾನು 2017ರಿಂದಲೂ ಟೊಮೆಟೋ ಕೃಷಿ ಮಾಡಿಕೊಂಡು ಬಂದಿದ್ದೇನೆ. 2021ರಲ್ಲಿ ಹೀಗೆ ಟೊಮೆಟೊ ಬೆಳೆದು ಸರಿಸುಮಾರು 20 ಲಕ್ಷ ರೂ. ನಷ್ಟ ಅನುಭವಿಸಿದ್ದೆ. ಆದ್ರೆ ಈಗ ಒಳ್ಳೆಯ ಬೆಲೆ ಬಂದಿರುವುದರಿಂದ ಉತ್ತಮ ಆದಾಯ ಬಂದಿದೆ. ನಿಜಕ್ಕೂ ಖುಷಿಯಾಗುತ್ತಿದೆ. ನಾನು ಪ್ರತಿ ಕ್ರೇಟ್ ಟೊಮೆಟೋವನ್ನು 770-2,311 ರೂ. ದರದಲ್ಲಿ ಮಾರಾಟ ಮಾಡಿದ್ದೇನೆ. ಇನ್ನೂ 4,000 ಕ್ರೇಟ್ ಟೊಮೆಟೊ ಕಟಾವಿಗೆ ಬರಲಿದ್ದು, ಇದೇ ರೀತಿಯ ಒಳ್ಳೆಯ ರೇಟ್ ನಿರೀಕ್ಷಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Tomato Crisis, Tomato Crop, ಕೃಷಿ, ಟೊಮೆಟೋ, ಪುಣೆ ರೈತ, ಮುಂಬೈ agriculture, Ishwar Gaykar, maharashtra, Pune Farmer