ಬೆಂಗಳೂರು: ವಾರದ ಹಿಂದಷ್ಟೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಆಲಿಕಲ್ಲು ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಇಂದಿನಿಂದ ಮೂರು ದಿನಗಳಕಾಲ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೂರು ದಿನಗಳ ಕಾಲ ರಾಜ್ಯದಲ್ಲಿ ಗುಡುಗು, ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಹಾಗೂ ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಎರದು ಆಂಟಿ ಸೈಕ್ಲೋನ್ ಗಳು ರೂಪುಗೊಂಡಿದ್ದು, ಇದು ತೇವಾಂಶವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವೆಡೆಗಳಲ್ಲಿ ಮಳೆಯಾಗುತ್ತಿದೆ.
ಪಶ್ಚಿಮ ಮಾರುತಗಳು ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿರುವುದರಿಂದ ಪೆನಿನ್ಸುಲಾರ್ ಭಾರತದವರೆಗೆ ನುಸುಳುತ್ತಿರುವುದರಿಂದ ತಂಪಾದಗಾಳಿಯು ಘನೀಕರಣದ ಮಟ್ಟವನ್ನು ಕಡಿಮೆ ಮಾಡಿದೆ. ಆದ್ದರಿಂದ ಅದು ಆಲಿಕಲ್ಲು, ಮಂಜುಗಡ್ಡೆ ರೂಪದಲ್ಲಿ ಸುರಿಯುತ್ತಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನಿಂದ ವಾಯುವ್ಯ ಭಾರತದ ರಾಜಸ್ಥಾನದ ಮೇಲೆ ಚಂಡಮಾರುತದ ಪ್ರಭಾವ ಬೀರಲಿದೆ. ರಾಜಸ್ಥಾನ, ಕರ್ನಾಟಕದ ಹಲವೆಡೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ದೆಹಲಿ, ಪಂಜಾಬ್, ಹರಿಯಾಣದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮುಂದಿನ ಐದು ದಿನಗಳಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶದ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ..