ಬೆಂಗಳೂರು: ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದನ್ನು ಪ್ರೋತ್ಸಾಹಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹಾಗೂ ಈ ಉದ್ದೇಶಕ್ಕೆ ಹಿಂದಿನ ವರ್ಷದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಬಂಡವಾಳ ನಿಧಿ ನೀಡಲು ಅವಕಾಶ ಮಾಡಲಾಗಿತ್ತು ಹಾಗೂ ಸಹಕಾರ ವಲಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಅವಕಾಶ ನೀಡಲಾಗಿದೆ. ನಮ್ಮ ಸರ್ಕಾರವು `ಗೃಹಿಣಿ ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಜೆಟ್ ಮುಖ್ಯಾಂಶಗಳು:-
ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಶ್ರಮಿಸುವ ಮಹಿಳಾ ಕೃಷಿ ಕಾರ್ಮಿಕರ ಕುರಿತು ನಮ್ಮ ಸರ್ಕಾರ ಹೊಂದಿರುವ ಕಾಳಜಿಯ ಪ್ರತೀಕವಾಗಿ, ಶ್ರಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ರಾಜ್ಯ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ.ಗಳ ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ.
ಗೃಹಿಣಿಯರಿಗೆ ಮನೆಯಲ್ಲಿಯೇ ಲಾಭದಾಯಕ ಉದ್ಯಮ (Home based Industry) ಪ್ರಾರಂಭಿಸಲು ಅನುವಾಗುವಂತೆ ಪ್ರಸಕ್ತ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು.
ಬಾಲಕಿಯರು ಮತ್ತು ಮಹಿಳೆಯರ ಸಬಲೀಕರಣದ (Women empowerment) ಕುರಿತು life cycle approach ಹೊಂದಲು ನಿರ್ಧರಿಸಲಾಗಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ‘ಆರೋಗ್ಯ ಪುಷ್ಟಿ’ ಯೋಜನೆಯಡಿ ಮಾತೃಪೂರ್ಣ ಯೋಜನೆಯಂತೆ ಅರ್ಹ ವಿವಾಹಿತ ಮಹಿಳೆಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು Prophylactic IFA ಮಾತ್ರೆಗಳನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಗರಿಷ್ಠ 6 ತಿಂಗಳ ಅವಧಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಒದಗಿಸಲಾಗುವುದು. ಈ ಯೋಜನೆಯಡಿ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒತ್ತು ನೀಡಲಾಗುವುದು.
ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಪರಿಹಾರವನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳಿ
ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದ ಒಟ್ಟು 30 ಲಕ್ಷ ಮಹಿಳೆಯರಿಗೆ ಸಹಾಯವಾಗುವ ಈ ಯೋಜನೆಗೆ 1,000 ಕೋಟಿ ರೂ. ಗಳನ್ನು ಒದಗಿಸಲಾಗುವುದು.
ರಾಜ್ಯದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ `ವಿದ್ಯಾವಾಹಿನಿ’ ಎಂಬ ಯೋಜನೆಯಡಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದಲ್ಲಿನ ಒಟ್ಟು 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ (Education) ಅನುಕೂಲವಾಗಲಿದೆ.