ಪ್ರಿಯ ರೈತರೇ, ನಿಮ್ಮ ಹೊಲಕ್ಕೆ ಹೋಗಲು ರಸ್ತೆ ಇಲ್ಲವೇ? ನಿಮ್ಮ ಜಮೀನಿನ ದಾರಿ ಹಾಳಾಗಿದ್ದರೆ ಅಥವಾ ನಿಮ್ಮ ಹೊಲಕ್ಕೆ ಹೋಗುವ ರಸ್ತೆ ಕೆಟ್ಟು ಹೋಗಿದ್ದರೆ ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿಮ್ಮ ಹೊಲಕ್ಕೆ ಹೋಗಿ ಬರಲು ರಸ್ತೆ ಮಾಡಿಕೊಡುತ್ತದೆ. ರೈತರು ತಡ ಮಾಡದೆ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.

ನಿಮ್ಮ ಹೊಲಕ್ಕೆ ಉಚಿತವಾಗಿ ರಸ್ತೆಯನ್ನು ಹೇಗೆ ಮಾಡಿಕೊಳ್ಳಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ನರೇಗಾ ಯೋಜನೆ ಅಡಿಯಲ್ಲಿ ಈ ಕೆಲಸ ಹೇಗೆ ಮಾಡಲಾಗುತ್ತದೆ? ಇದರಲ್ಲಿ ಕಾರ್ಮಿಕರಿಗೆ ಸಿಗುವ ದಿನದ ಕೂಲಿ ಎಷ್ಟು? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

» ಈ ನರೇಗಾ ಯೋಜನೆ ಅಡಿ ತಮ್ಮ ಹೊಲಕ್ಕೆ ರಸ್ತೆ ಮಾಡಿಕೊಳ್ಳುವರು ಒಂದು ಅರ್ಜಿ ಬರೆಯಬೇಕಾಗುತ್ತದೆ.

» ಅರ್ಜಿಯನ್ನು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಫೀಸಿಗೆ ಹೋಗಿ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕು.

» ನೀವು ಬರೆದ ಅರ್ಜಿಯಲ್ಲಿ ನಿಮ್ಮ ಹೊಲದ ಸರ್ವೆ ನಂಬರ್ ಮತ್ತು ಈಗಿರುವ ದಾರಿಯು ಕೊನೆಗೊಳ್ಳುವ ಹೊಲದ ಸರ್ವೆ ನಂಬರನ್ನು ಮತ್ತು ವಿಸ್ತೀರ್ಣವನ್ನು ನಮೂದಿಸಿರಬೇಕು.

» ನೀವು ಅರ್ಜಿ ಸಲ್ಲಿಸಿದ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಅದನ್ನು ಅನುಮೋದನೆಗಾಗಿ ಇಡುತ್ತಾರೆ.

» ನಂತರ ನಿಮ್ಮ ಅರ್ಜಿಯನ್ನು ವಾರ್ಷಿಕ ಕ್ರಿಯೆ ಯೋಜನೆ ಅಡಿ ಸೇರಿಸಲಾಗುತ್ತದೆ.

» ಅಂತಿಮವಾಗಿ ಆ ಕೆಲಸದ ಖರ್ಚು ವೆಚ್ಚಗಳನ್ನು ಪರಿಗಣನೆಗೆ ತೆಗೆದುಕೊಂಡು ನಂತರ ಕಾರ್ಯರೂಪಕ್ಕೆ ತರಲಾಗುತ್ತದೆ.

ಈಗ ರಸ್ತೆ ಕೆಲಸ ಹೇಗೆ ಮಾಡಲಾಗುತ್ತದೆ ಎಂಬುದನ್ನು ನೋಡುವುದಾದರೆ,

* ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಹೊಲಕ್ಕೆ ಬಂದು ರಸ್ತೆ ಮಾಡಬಹುದಾದ ಜಾಗದ ಅಳತೆ ಮಾಡಿ ಅದಕ್ಕೆ ತಗಲುವ ವೆಚ್ಚವನ್ನು ಅಂದಾಜಿಸಿ ಕೆಲಸ ನಿರ್ವಹಿಸಲು ಸೂಚಿಸುತ್ತಾರೆ.

* ಇದರ ನಂತರ ನರೇಗಾ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರಿಗೆ ರಸ್ತೆ ಮಾಡಲು ಸೂಚಿಸಲಾಗುತ್ತದೆ.

* ಈ ಕಾರ್ಮಿಕರ ವೇತನವನ್ನು ವಾರಕ್ಕೊಮ್ಮೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

* ರಸ್ತೆ ಮಾಡಲು ಬೇಕಾಗುವ ನೀರು ಹೀರಿಕೊಳ್ಳದ ಗಡಸಾದ ಮಣ್ಣು, ಸಣ್ಣ ಸಣ್ಣ ಗುಂಡು ಕಲ್ಲುಗಳು, ನೀರು ಸರಾಗವಾಗಿ ಹೋಗಲು ರಸ್ತೆ ಎರಡು ಕಡೆ ಕಂದಕ ನಿರ್ಮಾಣ ಮಾಡುವ ಯಂತ್ರಗಳಿಂದ ರಸ್ತೆಯನ್ನು ಮಾಡಿಸಲಾಗುತ್ತದೆ.

“ನಮ್ಮ ಹೊಲ ನಮ್ಮ ರಸ್ತೆ” ಈ ಯೋಜನೆ ಅಡಿಯಲ್ಲಿ ಬರುವ ಮುಖ್ಯ ಅಂಶಗಳನ್ನು ನೋಡುವುದಾದರೆ,

• ನಿಮ್ಮ ಹೊಲಕ್ಕೆ ರಸ್ತೆ ಮಾಡಲು ರೈತರು ಪರಸ್ಪರ ಕೂಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ರಸ್ತೆ ಮಾಡಲು ಸಾಧ್ಯವಿಲ್ಲ.

• ನರೇಗಾ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಮಾಡಲು 60ರಷ್ಟು ಯಂತ್ರಗಳ ಸಹಾಯದಿಂದ ಮತ್ತು 40 ರಷ್ಟು ಕಾರ್ಮಿಕರ ಸಹಾಯದಿಂದ ನಿರ್ಮಿಸಲಾಗುತ್ತದೆ.

• ಎಲ್ಲರಿಗೂ ಅಂದರೆ ಗಂಡು ಮತ್ತು ಹೆಣ್ಣು ಕೂಲಿಗಳಿಗೆ ಸಮಾನ ವೇತನ ನೀಡಲಾಗುತ್ತದೆ.

ನೀವು ಈ ಯೋಜನೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವರ ಪಡೆದುಕೊಳ್ಳಬಹುದು.

ಈ ರೀತಿಯಾಗಿ ರೈತರು ಹಾಳಾದ ತಮ್ಮ ಹೊಲದ ದಾರಿಯನ್ನು ಸರಿಪಡಿಸಿಕೊಳ್ಳಬಹುದು.

ಇದಿಷ್ಟು ಈ ಯೋಜನೆ ಬಗ್ಗೆ ಇರುವ ಮಹತ್ವದ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬೇಕು.

ಹೆಚ್ಚಿನ ಕೃಷಿ ಸಂಬಂಧಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರೀ…

Leave a Reply

Your email address will not be published. Required fields are marked *