ಪ್ರಿಯ ರೈತರೇ, ಇವತ್ತಿನ ದಿನ ನಾವು ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸೋಲಾರ್ ಪಂಪ್‌ಸೆಟ್ ಖರೀದಿಗೆ ದೊರೆಯುವ ಸಬ್ಸಿಡಿ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ..

ಇದರಲ್ಲಿ ಪ್ರಮುಖ ಅಂಶಗಳನ್ನು ನೋಡುವುದಾದರೆ,

» ತೋಟಗಾರಿಕೆ ಇಲಾಖೆಯು ರೈತರಿಗೆ ಸೋಲಾರ್ ಪಂಪ್ ಸೆಟ್‌ಗಳನ್ನು ನೀಡುತ್ತಿದೆ.

» ರೈತರು ಬೆಳೆಗಳಿಗೆ ನೀರು ಹಾಯಿಸುವಾಗ ದಿಢೀರ್ ವಿದ್ಯುತ್ ಕೈಕೊಡುವುದನ್ನು ತಪ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

» ಪ್ರಸ್ತುತ ವರ್ಷದಿಂದ ರೈತರಿಗೆ ಈ ಯೋಜನೆ ಅಡಿ ಸೋಲಾರ್ ಪಂಪ್ ಸೆಟ್ ಖರೀದಿಸಲು ಶೇ.50 ರಷ್ಟು ಸಬ್ಸಿಡಿ ನೀಡಲಾಗುವುದು.

ರೈತರು ಬೆಳೆಗಳಿಗೆ ನೀರು ಹಾಯಿಸುವಾಗ ದಿಢೀರ್ ವಿದ್ಯುತ್ ಕೈಕೊಡುವುದನ್ನು ತಪ್ಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯು ಕೃಷಿಕರಿಗೆ ಸೋಲಾರ್ ಪಂಪ್ ಸೆಟ್‌ಗಳನ್ನು ನೀಡಲು ಮುಂದಾಗಿದೆ.

ಅನೇಕ ಸಲ ಇದ್ದಕ್ಕಿದ್ದಂತೆ ವಿದ್ಯುತ್ ತೆಗೆದಂತಹ ಸಂದರ್ಭದಲ್ಲಿ ಸಂಪೂರ್ಣ ಬೆಳೆಗೆ ನೀರು ಹಾಯಿಸಲಾಗದೆ ರೈತರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪದೇ ಪದೇ ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನಿರಂತರವಾಗಿ ಮತ್ತು ಅವಶ್ಯಕತೆ ಇರುವಾಗ ನೀರು ಹಾಯಿಸಲು ಸಾಧ್ಯವಾಗುವುದಿಲ್ಲ.

ಬೋರ್‌ವೆಲ್‌ನಿಂದಲೋ ಅಥವಾ ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ನೀರನ್ನು ಬೆಳೆಗೆ ಹಾಯಿಸಲು ವಿದ್ಯುತ್ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಪ ಬೆಳೆಗೆ ನೀರು ಕೊಟ್ಟು, ಉಳಿದ ಬೆಳೆಗೆ ನೀರು ಕಟ್ಟಲಾಗದಿದ್ದರೆ ರೈತರು ಅನೇಕ ಸಲ ನಷ್ಟವನ್ನು ಅನುಭವಿಸಬೇಕಾಗುತ್ತದೆ .

ಕೆಲವೊಮ್ಮೆ ಇಡೀ ದಿನ ವಿದ್ಯುತ್ ಕೈಕೊಡುವ ಸಾಧ್ಯತೆಗಳು ಇರುತ್ತದೆ. ಆದರೆ ಬೇಸಿಗೆಯಲ್ಲಿ ವಿದ್ಯುತ್‌ನ ಅಭಾವದಿಂದ ರೈತರು ಭಾರಿ ಸಮಸ್ಯೆಗೆ ಸಿಲುಕುತ್ತಾರೆ. ಈ ಎಲ್ಲ ಸಮಸ್ಯೆಗಳಿಂದ ರೈತರನ್ನು ಪಾರು ಮಾಡಲು ಸರ್ಕಾರವು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್‌ಗಳನ್ನು ನೀಡಲಾಗುತ್ತಿದೆ.

ಸೋಲಾರ್‌ನ 3 ಎಚ್‌ಪಿ ಸೋಲಾರ್ ಪಂಪ್‌ನ ಬೆಲೆ 2 ರಿಂದ 2.50 ಲಕ್ಷ ರೂ.,

5 ಎಚ್‌ಪಿ ಸೋಲಾರ್ ಪಂಪ್‌ನ ಬೆಲೆ ಸುಮಾರು 3 ರಿಂದ 3.50 ಲಕ್ಷ ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸಲು ರೈತರಿಗೆ ಆಗುವುದಿಲ್ಲ. ಹೀಗಾಗಿ ಪ್ರಸಕ್ತ‌ ವರ್ಷದಿಂದ ರೈತರಿಗೆ ಸೋಲಾರ್ ಪಂಪ್ ಸೆಟ್ ಖರೀದಿಸಲು ಶೇ. 50 ರಷ್ಟು ಸಬ್ಸಿಡಿಯನ್ನು ತೋಟಗಾರಿಕೆ ಇಲಾಖೆ ನೀಡಲಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಏಕರೀತಿಯ ಅನುದಾನ ಸಿಗಲಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯು ತಿಳಿಸಿದೆ.

ಆಟೋಮೆಟಿಕ್ ಸಿಸ್ಟಂ ಇದ್ದರೆ ರೈತರಿಗೆ ಶ್ರಮವೂ ಕಡಿಮೆ ಇರುತ್ತದೆ. ಹಾಗೂ ಇದರಿಂದ ಖರ್ಚೂ ಕೂಡ ಕಡಿಮೆಯಾಗುತ್ತದೆ.

ಕೃಷಿ ಹೊಂಡ ಹೊಂದಿರುವ ರೈತರಿಗೆ ಮೊದಲ ಆದ್ಯತೆ!

ರಾಜ್ಯದ ಜಿಲ್ಲಾ ಮತ್ತು ತಾಲೂಕು ಮಟ್ಟದ ತೋಟಗಾರಿಕೆ ಇಲಾಖೆಗಳು ಕೃಷಿ ಹೊಂಡಗಳನ್ನು ಹೊಂದಿದವರಿಗೆ ಸೋಲಾರ್ ಪಂಪ್ ಸೆಟ್ ಪಡೆಯುವುದಕ್ಕೆ ಮೊದಲ ಆದ್ಯತೆ ನೀಡಲಿದೆ. ಸಂಭಂದಿತ ಇಲಾಖೆಯಡಿ ನೋಂದಾಯಿತ ಸಂಸ್ಥೆಗಳಲ್ಲಿ ಮಾತ್ರವೇ ಖರೀದಿಸಿದ ಪಂಪ್ ಸೆಟ್ ಗಳಿಗೆ ಸಬ್ಸಿಡಿ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ನೀವೇನಾದರೂ ಬೋರ್‌ವೆಲ್‌ಗಳಿಗೆ ಹೊಸದಾಗಿ ಸೋಲಾರ್ ಪಂಪ್ ಸೆಟ್‌ಗಳನ್ನು ಅಳವಡಿಸುವುದಾದರೆ ಈ ಹಿಂದೆ ಅಳವಡಿಸಿರುವ ವಿದ್ಯುತ್ ಚಾಲಿತ ಪಂಪ್ ಸೆಟ್ ಗಳನ್ನು ಬಿಚ್ಚಿಡಬೇಕು. ಪ್ಯಾನಲ್ ಬೋರ್ಡ್, ಮೋಟಾರ್ ಸಹಿತ ಸೋಲಾರ್‌ಪಂಪ್‌ಗಳನ್ನು ಜೋಡಿಸಿಕೊಳ್ಳಬೇಕು. ಹೀಗೆ ಅಗತ್ಯವಿದ್ದಾಗ ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಂಡು, ಬೇಡವಾದಾಗ ತೆಗೆದಿಡಬಹುದು. ಆದರೆ ಕೃಷಿ ಹೊಂಡಗಳಲ್ಲಿ ಸದಾ ಅಳವಡಿಸಿಕೊಳ್ಳಬಹುದು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಅಡಿಯಲ್ಲಿ ಪ್ರಸಕ್ತ ವರ್ಷದಲ್ಲಿ 200 ಮಂದಿ ರೈತರಿಗೆ ಅವಕಾಶ ನೀಡಲಾಗಿದೆ. RKVY ಯೋಜನೆಯಡಿ ಈ ವರ್ಷ ಮೂರು ಕೋಟಿ ಅನುದಾನ ದೊರೆತಿದೆ. ಇದು ಆರಂಭಿಕ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಅನುದಾನದ ಆಧಾರದ ಮೇಲೆ ವಿಸ್ತರಿಸಲಾಗುವುದು ಎಂದು ರಾಜ್ಯ ತೋಟಗಾರಿಕೆ ಇಲಾಖೆ‌ ತಿಳಿಸಿದೆ.

ಸೋಲಾರ್ ಪಂಪ್ ಸೆಟ್ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ಕೇಳಿಕೊಳ್ಳಲಾಗಿದೆ.

https://kredlinfo.in/Applnoffgridswp_2022

ಇದಿಷ್ಟು ಈ ಯೋಜನೆ ಬಗ್ಗೆ ಇರುವ ಮಹತ್ವದ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.

ಕೃಷಿ ಬಗ್ಗೆ ಹೆಚ್ಚಿನ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. 👇🏻👇🏻

Leave a Reply

Your email address will not be published. Required fields are marked *