ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಗೋವಿನಜೋಳ, ಹತ್ತಿ, ಸೋಯಾಬೀನ್ ಬೆಳೆಗೆ ತೀವ್ರ ಹಾನಿಯಾಗಿತ್ತು. ಇದೀಗ ಭತ್ತದ ಬೆಳೆಗೆ ಜಿಗಿ ಹುಳುವಿನ ಬಾಧೆ ಕಾಡುತ್ತಿರುವುದರಿಂದ ಉತ್ತಮ ಆದಾಯ ಗಳಿಸಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.
ತಾಲೂಕಿನ ನದಿ ತೀರದ ಗ್ರಾಮಗಳಾದ ಲಕಮಾಪುರ, ಬಾಳಂಬೀಡ, ಆರೇಲಕಮಾಪುರ, ಬ್ಯಾತನಾಳ, ಹಿರೇಹುಲ್ಲಾಳ, ಕೂಸನೂರು, ವಾಸನ. ಸೋಮಾಪುರ, ಮಾಳಾಪುರ, ಕರೆಕ್ಯಾತನಹಳ್ಳಿ, ಹಿರೂರು ಭಾಗ ಸೇರಿದಂತೆ ಅಕ್ಕಿಆಲೂರು ಹೋಬಳಿ ತಿಳವಳ್ಳಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಜಿಗಿಹುಳುಗಳ ಕಾಟ ಭತ್ತಕ್ಕೆ ಮಾರಕವಾಗಿ ಕಾಡಲಾರಂಭಿಸಿದೆ.
ಜಿಗಿ ಹುಳುವಿನ ಬಾಧೆ ಪ್ರಾಕೃತಿಕ ವಿಕೋಪದ ಭಾಗವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರ ಈ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ನೀಡುವ ಅಗತ್ಯವಿದೆ. ಕೂಡಲೇ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಾನಿಯ ಅಂದಾಜು ಮಾಡಿ ವರದಿ ಸಲ್ಲಿಸಬೇಕು. ಪರ್ಯಾಯ ಬೆಳೆಗೆ ವ್ಯವಸ್ಥೆ ಮಾಡಬೇಕು.
ತಾಲೂಕಿನಲ್ಲಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, ಇದರೊಂದಿಗೆ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದೆ. ಈಗಾಗಲೇ ಮಳೆಯಾಶ್ರಿತವಾಗಿ ಬಿತ್ತನೆ ಮಾಡಿದ್ದ ಹಲವು ರೈತರು ಭತ್ತದ ಕಟಾವು ಪೂರ್ಣಗೊಳಿಸಿದ್ದಾರೆ. ಆದರೆ, ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ನಾಟಿ ಭತ್ತದ ಫಸಲು ಕೈಗೆ ಬಾರದಂತಾಗಿದೆ. ಧರ್ಮಾ ಕಾಲುವೆ ಅಡಿಯ ಅಚ್ಚುಕಟ್ಟು ಪ್ರದೇಶ ಹಾಗೂ ವರದಾ ನದಿಯಿಂದ ನೀರಾವರಿಗೆ ಒಳಪಡುವ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತಕ್ಕೆ ಕುತ್ತು ಬಂದಿದೆ.
ತಾಲೂಕಿನಲ್ಲಿ ನಾಟಿ ಮಾಡಿರುವ ಭತ್ತಕ್ಕೆ ಕಂದು ಬಣ್ಣದ ಜಿಗಿ ಹುಳುಗಳು: ಬಹುದೊಡ್ಡ ಪ್ರಮಾಣದಲ್ಲಿ ದಾಳಿಯಿಟ್ಟಿವೆ. ಅದರಲ್ಲೂ ಸಣ್ಣ ಭತ್ತಕ್ಕೆ ಹೆಚ್ಚು ಸಮಸ್ಯೆ ತಂದೊಡ್ಡಿವೆ. ಅಲ್ಲಲ್ಲಿ, 1010 ಹಾಗೂ 1001 ತಳಿಗಳ ಭತ್ತಕ್ಕೂ ಜಿಗಿಹುಳು ಕಾಡುತ್ತಿವೆ. ಸಣ್ಣ ಭತ್ತದ ತಳಿಗಳಾದ ಅಮನ್ ಸೋನಾ, ಸೋನಾ ಮಸೂರಿ, ಶ್ರೀರಾಮ ಸೋನಾ ಭತ್ತದ ಹುಲ್ಲು ಸಿಹಿಯಾಗಿರುವುದರಿಂದ ಜಿಗಿಹುಳು ಇದಕ್ಕೆ ಬಹಳ ಹೆಚ್ಚಾಗುತ್ತಿದೆ.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇👇
https://chat.whatsapp.com/CatKjFMzi1f5uiEQn86AW0