ಪ್ರಿಯ ರೈತರೇ, ತೊಗರಿಯು ಉತ್ತರ ಕರ್ನಾಟಕದ ಪ್ರಮುಖ ಬೆಳೆಕಾಳು ಬೆಳೆಯಾಗಿದ್ದರು ರಾಜ್ಯದ ಸರಾಸರಿ ಇಳುವರಿ 704 ಕಿ.ಗ್ರಾಂ/ಹೆ ಇದ್ದು ದೇಶದ ಇಳುವರಿಗಿಂತ ಕಡಿಮೆ ಇದೆ. ಇದಕ್ಕೆ ಕಾರಣಗಳೆಂದರೆ ಸರಿಯಾಗಿ ಕೀಟ, ರೋಗಗಳು ಹಾಗೂ ಕಳೆ ನಿರ್ವಹಣೆ ಮಾಡದೆ ಇರುವುದು. ಸಮಗ್ರ ಪೋಷಕಾಂಶಗಳ ನಿರ್ವಹಣೆ ಅರಿವು ಇಲ್ಲದಿರುವುದು. ರೈತರು ಮುಖ್ಯ ಪೋಷಕಾಂಶಗಳನ್ನು ಮಾತ್ರ ಭೂಮಿಗೆ ಹಾಕುತ್ತಿರುವುದು, ಸಾವಯುವ ಗೊಬ್ಬರಗಳು ಮತ್ತು ಲಘು ಪೋಷಕಾಂಶಗಳನ್ನು ಹಾಕದೆ ಇರುವುದರಿಂದ ಬೆಳೆಗಳಲ್ಲಿ ಪೋಷಕಾಂಶಗಳ ಅಸಮತೋಲನವಾಗಿ ಸರಿಯಾಗಿ ಬೆಳವಣಿಗೆಯಾಗದೆ ಅತೀಯಾಗಿ ಹೂ ಮತ್ತು ಕಾಯಿ ಉದುರುವುದರಿಂದ ಇಳುವರಿಯಲ್ಲಿ ಬಾರಿ ಕುಂಠಿತವಾಗುತ್ತಿದೆ. ಇವತ್ತಿನ ಮಾರುಕಟ್ಟೆಯಲ್ಲಿ ಕೀಟ, ರೋಗ ಮತ್ತು ಕಳೆಗಳ ನಿರ್ವಹಣೆಗಾಗಿ ಅನೇಕ ಸಿದ್ದ ಔಷಧಗಳು ಲಭ್ಯವಿರುತ್ತವೆ. ಆದರೆ ತೊಗರಿ ಹೂ ಮತ್ತು ಕಾಯಿ ಉದುರುವ ಸಮಸ್ಯೆಯು ಅಧಿಕವಾಗಿದ್ದು ಇದನ್ನು ತಡೆಗಟ್ಟಲು ಮರುಕಟ್ಟೆಯಲ್ಲಿ ದ್ವಿದಳ ಬೆಳೆಗೆ ಅವಶ್ಯವಿರುವ ಸಮಗ್ರ ಪೊಷಕಾಂಶಗಳನ್ನೊಳಗೊಂಡ ರಾಸಾಯನಿಕಗಳ ಲಭ್ಯವಿರುವದಿಲ್ಲ.

ತೊಗರಿ ಹೂ ಮತ್ತು ಕಾಯಿ ಉದುರುವಿಕೆಯನ್ನು ತಡೆಗಟ್ಟಲು ಮತ್ತು ತೊಗರಿ, ಹೆಸರು, ಉದ್ದು ಮತ್ತು ಸೊಯಾ ಅವರೆ ಬೆಳೆಗಳಲ್ಲಿ ಹೂ ಮತ್ತು ಕಾಯಿ ಕಟ್ಟುವಿಕೆ ಹೆಚ್ಚಿಸಿ ಉತ್ತಮವಾಗಿ ಬೆಳೆದು, ಸರಿಯಾಗಿ ಕಾಳು ತುಂಬಿಕೊಂಡು ಉತ್ತಮ ಗುಣಮಟ್ಟದ ಅಧಿಕ ಇಳುವರಿ ಕೊಡುವಂತೆ ಬೆಳೆಯಲ್ಲಿ ಶಕ್ತಿ ತುಂಬಲು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ, ರಾಯಚೂರು ಅಡಿಯಲ್ಲಿ ಬರುವ ವಲಯ ಕೃಷಿ ಸಂಶೋಧನಾ ಕೇಂದ್ರ, ಮತ್ತು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯಿಂದ “ಪಲ್ಸ ಮ್ಯಾಜಿಕ್” ಎಂಬ ಉತ್ಪನ್ನವನ್ನು ಹೊರತಂದಿದ್ದಾರೆ. ಪಲ್ಸ ಮ್ಯಾಜಿಕ್ ಬೆಳೆಕಾಳುಗಳಾದ ತೊಗರಿ, ಹೆಸರು, ಉದ್ದು ಮತ್ತು ಸೋಯಾ ಅವರಗಳಲ್ಲಿ ಹೂ ಮತ್ತು ಕಾಯಿ ಉದುರುವಿಕೆಯನ್ನು ತಡೆಗಟ್ಟ ಇಳುವರಿಯಲ್ಲಿ ಶೇ.17-20ರ ವರೆಗೆ ಹೆಚ್ಚಿಸುತ್ತದೆ. ಈ ಪಲ್ಸ ಮ್ಯಾಜಿಕ್‌ವು ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯಲ್ಲಿ ಅಭಿವೃದ್ಧಿ ಪಡಿಸಿ, ಉತ್ಪಾದಿಸಿ ರಾಯಚೂರು ವಿಜ್ಞಾನಗಳ ವಿಶ್ವ ವಿದ್ಯಾಲಯದ ಅಡಿಯಲ್ಲಿ ಇರುವ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಕೃಷಿ ವಿಸ್ತರಣ ಶಿಕ್ಷಣ ಕೇಂದ್ರಗಳಲ್ಲಿ ಅದರ ಲಬ್ಯತೆ ಇರುತ್ತದೆ.

# ಏನಿದು ಪಲ್ಸ ಮ್ಯಾಜಿಕ್:

ಪಲ್ಸ ಮ್ಯಾಜಿಕ್ ಒಂದು ಮುಖ್ಯ ಮತ್ತು ಲಘು ಪೋಷಕಾಂಶಗಳು ಹಾಗೂ ಸಸ್ಯ ವರ್ಧಕಗಳನ್ನು ಹೊಂದಿದ್ದು ಬೆಳೆಗಳ ಬೆಳವಣಿಗೆಯನ್ನು ಹೆಚ್ಚಿಸಿ, ಹೂ ಮತ್ತು ಕಾಯಿ ಉದುರುವುದನ್ನು ತಡೆಗಟ್ಟಿ, ಕಾಳುಗಳು ದಪ್ಪ ಪುಷ್ಟವಾಗಿಸಿ ತೊಗರಿ ಹಾಗೂ ದ್ವಿದಳ ಧಾನ್ಯದ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಗುಣ ಮಟ್ಟದ ಪಸಲು ಪಡೆಯಲು ಸಹಕಾರಿ.

| # ಪಲ್ಸ ಮ್ಯಾಜಿಕ್ನಲ್ಲಿರುವ ಪೋಷಕಾಂಶಗಳ ಪ್ರಮಾಣ:

ಸಾರಜನಕ – 10%

ರಂಜಕ – 40%

ಲಘು ಪೋಷಕಾಂಶಗಳು – 03%

ಸಸ್ಯ ಪ್ರಚೋದಕಗಳು -20ಪಿಪಿಎಂ

# ಪಲ್ಪ ಮ್ಯಾಜಿಕ್ ಸಿಂಪಡಿಸುವ ಸಮಯ:

ಪಲ್ಸ ಮ್ಯಾಜಿಕ್‌ನ್ನು ತೊಗರಿ ಮತ್ತು ಸೊಯಾ ಅವರೆಯಲ್ಲಿ ಎರಡು ಬಾರಿ ಸಿಂಪಡಿಸಬೇಕು. ಮೊದಲನೆ ಸಿಂಪರಣೆಯನ್ನು ಶೇ.50 ರಷ್ಟು ಹೂವಾಡುವ ಹಂತದಲ್ಲಿ ಮತ್ತು ಎರಡನೇಯ : ಸಿಂಪರಣೆಯನ್ನು ಮೊದಲನೇ ಸಿಂಪರಣೆಯಾದ 15 ದಿನಗಳ ನಂತರ ಸಿಂಪರಣೆ ಮಾಡಬೇಕು. ಹೆಸರು ಮತ್ತು ಉದ್ದು ಬೆಳೆಗಳಲ್ಲಿ ಶೇ.50 ರಷ್ಟು ಹೂವಾಡುವ ಹಂತದಲ್ಲಿ ಪಲ್ಸ ಮ್ಯಾಜಿಕ್‌ನ್ನು ಒಂದು ಬಾರಿ ಸಿಂಪಡಿಸಬೇಕು.

ಸಿಂಪಡಿಸುವ ವಿಧಾನ ಮತ್ತು ಪ್ರಮಾಣ:

ಪಲ್ಸ ಮ್ಯಾಜಿಕ್ 10 ಗ್ರಾಂ. ಮುಡಿ ಮತ್ತು 0.5 ಮಿ.ಲೀ ದ್ರಾವಣವನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣಮಾಡಿ ತೊಗರಿಗೆ ಸಿಂಪಡಿಸಬೇಕು. ಆದರೆ ಸೋಯಾ ಅವರೆ, ಹೆಸರು ಮತ್ತು ಉದ್ದು ಬೆಳೆಗಳಿಗೆ ಪಲ್ಸ ಮ್ಯಾಜಿಕ್ 7-8 ಗ್ರಾಂ, ಮುಡಿ (ಎ) ಮತ್ತು 0.5 ಮಿ.ಲೀ ದ್ರಾವಣವನ್ನು (ಬಿ) ಲೀಟರ್ ನೀರಿನಲ್ಲಿ ಬೆರಸಿ, ಚೆನ್ನಾಗಿ ಮಿಶ್ರಣಮಾಡಿ ಸಿಂಪರಣೆಯನ್ನು ಮಾಡಬೇಕು. ಅತೀ ಉತ್ತಮ ಫಲಿತಾಂಶಕ್ಕೆ ಬೆಳಗ್ಗೆ 11 ಗಂಟೆಯಿಂದ ಸಾಯಂಕಾಲ 3 ಗಂಟೆವರಿಗೆ ಸಿಂಪರಣೆ ಕೈಗೊಳ್ಳವದು ಸೂಕ್ತ. ಪಲ್ಸ ಮ್ಯಾಜಿಕ್‌ನ್ನು ಯಾವುದೇ ಕೀಟನಾಶಕ ಅಥವಾ ಶಿಲೀಂದ್ರನಾಶಕ (ತಾಮ್ರಯುಕ್ತ ಹೊರತುಪಡಿಸಿ) ಗಳೊಂದಿಗೆ ಮಿಶ್ರಣಮಾಡಬಹುದು. ಪ್ರತಿ ಎಕರೆಗೆ ಪ್ರತಿ ಸಿಂಪರಣೆಗೆ 2 ಕಿ.ಗ್ರಾಂ ಪಲ್ಸ ಮ್ಯಾಜಿಕ್ ತೊಗರಿ ಬೆಳೆಗೆಬೇಕಾದರೆ ಹೆಸರು, ಉದ್ದು ಮತ್ತು ಸೊಯಾ ಅವರೆ ಬೆಳೆಗಳಿಗೆ 1.5 ಕಿ. ಗ್ರಾಂ ಪಲ್ಸ ಮ್ಯಾಜಿಕ್ ಪ್ರತಿ ಎಕರೆಗೆ ಪ್ರತಿ ಸಿಂಪರಣೆಗೆ ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.

# ಇದರಿಂದ ಆಗುವ ಉಪಯೋಗಗಳು:

• ಬೆಳೆಗಳಿಗೆ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ದಪ್ಪ – ಪುಷ್ಟವಾಗಿ ಬೆಳೆಯುತ್ತವೆ.

• ಹೂ ಮತ್ತು ಕಾಯಿಗಳ ಉದುರುವುಕೆಯನ್ನು ತಡೆಗಟ್ಟುವುದರ ಜೊತೆಗೆ ಕಾಯಿ ಕಟ್ಟುವಿಕೆ ಹೆಚ್ಚಾಗುತ್ತದೆ.

• ಪ್ರತಿ ಗಿಡದಲ್ಲಿ ಕಾಯಿಗಳ ಸಂಖ್ಯೆ ಹೆಚ್ಚಾಗಿ ಮಾಗುವಿಕೆ ಸಮನಾಗಿರುತ್ತದೆ.

• ಇದರ ಸಿಂಪರಣೆಯಿಂದ ಪ್ರತಿ ಕಾಳುಗಳು ದಪ್ಪವಾಗಿ ಕಾಳಿನ ತೂಕ ಗಣನೀಯವಾಗಿ ಹೆಚ್ಚುತ್ತದೆ.

• ಇದರಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ರೈತರು ತೊಗರಿ, ಹೆಸರು, ಉದ್ದು ಮತ್ತು ಸೊಯಾ ಅವರೆ ಬೆಳೆಗೆ ಬೇಕಾದ ಪೋಷಕಾಂಶಗಳ ಮತ್ತು ಬೆಳೆ ವರ್ಧಕಗಳ ಮಿಶ್ರಣವಿರುವ ಪಲ್ಸ ಮ್ಯಾಜಿಕ್ ಸಿಂಪಡಿಸಿ ಉತ್ತಮ ಗುಣ ಮಟ್ಟದ ಹೆಚ್ಚಿನ ಇಳುವರಿ ಪಡೆಯಿರಿ.

ಕೃಷಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇
https://chat.whatsapp.com/KgkiwIwv2THC2yeeT1DqYC

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ🌱

ವೆಬ್ಸೈಟ್ನ ಸಂಪರ್ಕದಲ್ಲಿರಿ…

Leave a Reply

Your email address will not be published. Required fields are marked *