ಆಫ್ರಿಕಾದ ದೈತ್ಯ ಶಂಖದ ಪೀಡೆ ( ಅಚಾಟಿನಾ ಫುಲಿಕಾ ) ಜನಸಾಮಾನ್ಯರು ಇದನ್ನು ಶಂಖದ ಹುಳು ಅಥವಾ ಬಸವನಹುಳು ಎಂದು ಕರೆಯುತ್ತಾರೆ . ಬೆಳೆಗಳಿಗೆ ಹುಳುಗಳಿಂದಾಗುವ ಹಾನಿಯನ್ನು ಗಮನಿಸಿ ಇವುಗಳಿಗೆ “ ಜೈವಿಕ ಭಯೋತ್ಪಾದಕರೆಂದು ಬಣ್ಣಿಸಲಾಗುತ್ತಿದೆ . ಈ ಹುಳುವಿನ ಬಾಧೆ 1979 ರಲ್ಲಿ ಕರ್ನಾಟಕದಲ್ಲಿ ಅಲಂಕಾರಿಕ ಮತ್ತು ತರಕಾರಿ ಬೆಳೆಗಳ ಮೇಲೆ ಕಂಡು ಬಂದ ಉಲ್ಲೇಖವಿದೆ . ಉತ್ತರ ಕರ್ನಾಟಕದ ಧಾರವಾಡ , ಬಾಗಲಕೋಟ ಮತ್ತು ಬೆಳಗಾವಿಯ ವಿವಿಧ ತಾಲೂಕಿನಲ್ಲಿ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ಈ ಪೀಡೆಯ ಬಾಧೆ ಕಳೆದ ಎರಡು ವರ್ಷಗಳಿಂದ ಹೆಚ್ಚಾಗುತ್ತಿರುವುದು ಕಂಡು ಬಂದಿದೆ .
ಜೀವನ ಚರಿತ್ರೆ :
ಮೊಟ್ಟೆಯಿಂದ ಹೊರಬರುವ ಮರಿ ಪೀಡೆಗಳು ಸುಮಾರು 1 ವರ್ಷ ಬೆಳೆದು ಪ್ರೌಢಾವ್ಯವಸ್ಥೆಗೆ ತಲುಪಿ ಸಂತಾನೋತ್ಪತ್ತಿ ಹೊಂದುತ್ತವೆ . ಒಂದೇ ಹುಳುವಿನಲ್ಲಿ ಗಂಡು ಮತ್ತು ಹೆಣ್ಣು ಎರಡು ಅಂಗಾಹಗಳಿದ್ದು ( ಹರ್ಮೊಪ್ರೋಡೈಟ್ ) ಒಂದೇ ಗಾತ್ರದ ಹುಳುಗಳಲ್ಲಿ ಮಿಲನಕ್ರಿಯೆ ನಡೆದು ವೀರ್ಯಾಣುಗಳ ಹಂಚಿಕೆಯಾಗುತ್ತದೆ .
ಪ್ರತಿ ಹುಳುವು 1 ರಿಂದ 4 ವಾರದ ಅವಧಿಯಲ್ಲಿ ಸುಮಾರು 100-500 ಮೊಟ್ಟೆಗಳನ್ನಿಡುತ್ತದೆ ಹುಳು ಮೊಟ್ಟೆಗಳನ್ನು ಮಣ್ಣಿನಲ್ಲಿ 3 ರಿಂದ 5 ಸೆಂ.ಮೀ ಆಳದಲ್ಲಿ ಗುಂಪಾಗಿಟ್ಟು ಸಿಂಬಳ ( ಮ್ಯೂಕಸ್ ) ದಂತಹ ದ್ರವವನ್ನು ಮೊಟ್ಟೆಗಳ ಮೇಲೆ ಮುಚ್ಚಿ ರಕ್ಷಣೆ ಕೊಡುತ್ತದೆ . ಮುಂದೆ 7 ರಿಂದ 17 ದಿವಸದ ಕಾವಿನ ನಂತರ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ . ಹೀಗೆ ಒಂದು ಹುಳು ತಾನು ಬದುಕುವ ಸುಮಾರು 3 ರಿಂದ 4 ವರ್ಷದ ಅವಧಿಯಲ್ಲಿ 1000 ರಿಂದ 1500 ವರೆಗೆ ಮೊಟ್ಟೆಗಳನ್ನಿಡಬಲ್ಲದು . ಹೀಗೆ ಇಟ್ಟ ಮೊಟ್ಟೆಗಳಲ್ಲಿ ಶೇ . 90 ಕ್ಕಿಂತ ಹೆಚ್ಚು ಮೊಟ್ಟೆಗಳು ನಿಸರ್ಗದಲ್ಲಿ ಉಳಿದು ಮರಿಗಳಾಗಿ ಬೆಳೆಯುವುದನ್ನು ಗಮನಿಸಲಾಗಿದೆ . ನಂತರ ಒಂದು ವರ್ಷದ ಅವಧಿಯಲ್ಲಿ ಬೆಳೆದು ಪುನಃ ತಮ್ಮ ಸಂತಾನವನ್ನು ಮುಂದುವರೆಸುತ್ತವೆ . ಸಾಮಾನ್ಯವಾಗಿ ಮಳೆಗಾಲದ ನಂತರ ಭೂಮಿಯಲ್ಲಿ ಗುಂಪುಗುಂಪಾಗಿ ಸುಪ್ತಾವಸ್ಥೆಗೆ ಹೋಗಿ ಮುಂದಿನ ಮಳೆಗಾಲದವರೆಗೂ ಮುಂದುವರೆಯುವುದು . ಅನುಕೂಲಕರ ವಾತಾವರಣವಿದ್ದಲ್ಲಿ ಸುಪ್ತಾವಸ್ಥೆಗೆ ಹೋಗದೆ ಇರಬಹುದು .
ಚಟುವಟಿಕೆ :
ಹಾಗೂ ಚಟುವಟಿಕೆಯಿಂದಿದ್ದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಇವು ವರ್ಷವಿಡೀ ಚುರುಕಾಗಿರುತ್ತವೆ . ರಾತ್ರಿಯಷ್ಟೇ ಚಟುವಟಿಕೆಯಿಂದಿರುವ ಹುಳುಗಳು ಕೆಲವೊಂದು ವೇಳೆ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನ ಸಮಯದಲ್ಲೂ ಇವುಗಳ ಬಾಧೆಯನ್ನು ಕಾಣಬಹುದು . ಇವು ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ಬೆಳೆಗಳನ್ನು ತಿಂದು ಪುನಃ ಬೆಳಗಿನ ಜಾವ ಆದ ಕೂಡಲೆ ತಮ್ಮ ಅಡಗು ಸ್ಥಾನಗಳಿಗೆ ಹೋಗುತ್ತವೆ . ತೋಟಗಾರಿಕೆ ಗಿಡಗಳಲ್ಲಿ ಬೆಳಗಿನ ಜಾವ ವಿಶ್ರಮಿಸುವ ಹುಳುಗಳು ಸಾಯಂಕಾಲ 6-7 ಗಂಟೆಯಾಗುತ್ತಿದಂತೆ ಕೆಳಗಿಳಿದು ಬೆಳೆಗಳನ್ನು ನಾಶಪಡಿಸುತ್ತವೆ ಇವು ಹೆಚ್ಚಾಗಿ ಸಂಘಜೀವಿಗಳಾಗಿದ್ದು ಬೆಳೆ ತಿನ್ನುವಾಗ , ಅಡಗುತಾಣಗಳಾದ ಹುಲ್ಲುಗಾವಲು , ಬಿದ್ದ ಕಸಕಡ್ಡಿಯ ಕೆಳಗೆ ಗಿಡದಬುಡದ ಕೆಳಗೆ ಗುಂಪು ಗುಂಪಾಗಿ ವಿಶ್ರಮಿಸುವುದನ್ನು ಕಾಣಬಹುದು.
ಬಸವನ ಹುಳುಗಳು ಬಾಧಿಸುವ ಬೆಳೆಗಳು : ಭಾರತದಲ್ಲಿ ಬೆಳೆಯುವ ಶೇ . 90 ರಷ್ಟು ಆಹಾರ , ತರಕಾರಿ , ತೋಟಗಾರಿಕೆ ಮತ್ತು ಹಣಕಾಸಿನ ಬೆಳೆಗಳು ಒಟ್ಟಾರೆ ಸುಮಾರು 500 ಬಗೆಯ ಸಸ್ಯಗಳು ಈ ಹುಳುಗಳಿಗೆ ಆಹಾರವಾಗಬಲ್ಲವು . ಹುಳುಗಳು ಸಾಮಾನ್ಯವಾಗಿ ಎಲೆಗಳನ್ನು ತಿಂದು ಬೆಳೆಗಳನ್ನು ನಾಶ ಮಾಡುವುದಲ್ಲದೇ ಕಾಂಡವನ್ನು ಕೊರೆದು ತಿನ್ನುವುದರಿಂದ ಗಿಡ / ಬಳ್ಳಿಯು ಒಂಗುತ್ತದೆ . ಎಲೆ , ತೊಗಟೆ , ಕಾಂಡವಲ್ಲದೇ ಹಣ್ಣುಗಳನ್ನೂ ಸಹ ತಿನ್ನುತ್ತದೆ .
ನಿರ್ವಹಣಾ ಕ್ರಮಗಳು:
> ಪೀಡೆಗೆ ಆಸರೆಯಾಗಿರುವ ಅಡಗು ತಾಣಗಳನ್ನು ನಿರ್ಮೂಲನೆ ಮಾಡಿ ತೋಟವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಬೇಕು . ಅಂದರೆ ಗಿಡದ ಟೊಂಗೆಗಳು ಭೂಮಿಗೆ ತಾಗದಂತೆ ನೋಡಿಕೊಳ್ಳುವುದು . ಹೀಗೆ ಮಾಡುವುದರಿಂದ ಹುಳುಗಳು ಆದಷ್ಟು ಅವಿತುಕೊಳ್ಳಲು ಗಿಡ ಹತ್ತುವ ಮಾರ್ಗವನ್ನು ಕಡಿತಗೊಳಿಸಿದಂತಾಗುತ್ತದೆ .
> ಹೊಲದಲ್ಲಿ ಕೃಷಿ ತ್ಯಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಅಡಗಿಕೊಳ್ಳಲು ಆಸರೆಯಾಗುವುದು ಆದ್ದರಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು ಸೇರುತ್ತವೆ . ನಂತರ ಆ ಗುಂಪಿಯನ್ನು ಸುಡುವುದರಿಂದ ಹುಳುಗಳನ್ನು ಹತೋಟಿ ಮಾಡಬಹುದು .
> ಹುಳುಗಳನ್ನು ಸಾಯಂಕಾಲ ಕೈಯಿಂದ ಆರಿಸಿ ಗೊಬ್ಬರ ಚೀಲದಲ್ಲಿ ಕಲೆ ಹಾಕಿ ನಾಶಪಡಿಸಲು ಉಪ್ಪನ್ನು ಹಾಕುವುದು ಹೆಚ್ಚು ಪರಿಣಾಮಕಾರಿ.
> ಹೊಲದ ಸುತ್ತಲೂ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹರಡುವುದರಿಂದ ಇಲ್ಲವೆ ಕಳೆತ ಕಸವನ್ನು ಹೊಲದಲ್ಲಿ ಅಲ್ಲಲ್ಲಿ ಗುಂಪಾಗಿಟ್ಟು ಅದಕ್ಕೆ ಆಸರೆ ಪಡೆಯಲು ಬರುವ ಹುಳುಗಳಿಗೆ ಭೀಚಿಂಗ್ ಹುಡಿ(powder) ( 25 ಕಿ.ಗ್ರಾಂ ಪ್ರತಿ ಹೆಕ್ಟೇರಗೆ ) / ಸುಣ್ಣದ ಪುಡಿ ( 25 ಕಿ.ಗ್ರಾಂ ಪ್ರತಿ ಹೆಕ್ಟೇರಗೆ ) ಯನ್ನು ಧೂಳೀಕರಿಸಿ ಅಥವಾ ತಂಬಾಕು + ಕಾಪರ್ ಸಲ್ಪೆಟ್ ( ಮೈಲುತುತ್ತೆ ) ದ್ರಾವಣವನ್ನು ಸಿಂಪರಣೆ ಮಾಡುವುದು ಪರಿಣಾಮಕಾರಿ .
> ಮಿಥೋಮಿಲ್ ಅಥವಾ ಥೈಯೋಡಿಕಾರ್ಬ ಅಥವಾ ತಾಮ್ರದ ಸಲ್ಪೆಟ್ ಆಧಾರಿತ ವಿಷಪಾಷಾಣವನ್ನು ಪ್ರತಿ ಹೆಕ್ಟೇರಿಗೆ 60 ಕಿ.ಗ್ರಾಂ . ನಂತೆ ಸಾಯಂಕಾಲ ಎರಚಬೇಕು . ( ತಯಾರಿಸುವ ವಿಧಾನ : ಪ್ರತಿ ಕಿ.ಗ್ರಾಂ ಛತ್ತ ಅಥವಾ ಗೋಧಿ ತೌಡಿನ ಜೊತೆಗೆ 400 ಗ್ರಾಂ , ಬೆಲ್ಲ + 300 ಮಿ.ಲೀ. ನಿರಿನ ಜೊತೆಗೆ ಮಿಶ್ರಣ ಮಾಡಿ ೨ ದಿನಗಳ ಕಾಲ ಕಳಿಯಲು ಬಿಟ್ಟು ಇದರ ಜೊತೆಗೆ 10 ಗ್ರಾಂ . ಮಿಥೋಮಿಲ್ / ಥೈಯೋಡಿಕಾರ್ಬ / ತಾಮ್ರದ ಸಲ್ವೇಟ್ ಮಿಶ್ರಣ ಮಡಬೇಕು ) .
> ಎತ್ತರವಾಗಿ ಬೆಳೆದ ತೋಟಗಾರಿಕೆ ಗಿಡಗಳ ಕಾಂಡಕ್ಕೆ ಭೂಮಿಯಿಂದ 1 ಮೀಟರ್ ಎತ್ತರದಲ್ಲಿ 15 ಸೆಂ . ಮೀ . ಎತ್ತರದ ತಾಮ್ರದ ಅಥವಾ ಕಾಪರ್ ಸಲ್ವೇಟ್ ( 10 ಗ್ರಾಂ . ) ಲೇಪನಮಾಡಿದ ತಗಡನ್ನು ಸುತ್ತಬೇಕು ಅಥವಾ ಶೇ .೧ ರ ಬೋರ್ಡೊಪೇಸ್ಟನ್ನು ಕಾಂಡದ ಸುತ್ತ ಲೇಪನ ಮಾಡುವುದರಿಂದ ಹುಳುಗಳು ಅಘಾತಗೊಂಡು ಗಿಡವನ್ನು ಏರುವುದಿಲ್ಲ .
> ಸಸ್ಯ ಪಾಲನಾ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ಉಪ್ಪು ಅಥವಾ ಭೀಚಿಂಗ ಪುಡಿಯನ್ನು ಹಾಕಿ ನಂತರ ಸಸಿಗಳಿರುವ ಪ್ಲಾಸ್ಟಿಕ್ ಚೀಲಗಳನ್ನು ಇಡುವದರಿಂದ ಶಂಖದ ಹುಳುವಿನ ಬಾಧೆ ಕಡಿಮೆಯಾಗುತ್ತದೆ .
>ಮೆಟಾಲ್ಡಿಹೈಡ್ ಶೇ . 2.5 ರ ಮಾತ್ರೆಯನ್ನು ಪ್ರತಿ ಹೆಕ್ಟೇರಿಗೆ 5 ಕೆಜಿಯಂತೆ ಹುಳುಗಳು ಅಡಗಿಕೊಳ್ಳುವ ಜಾಗದ ಸುತ್ತಲು ಹಾಗೂ ಅವು ಓಡಾಡುವ ಜಾಗ ಪತ್ತೆ ಹಚ್ಚಿ ಹಾಕಬೇಕು . ಈ ಮಾತ್ರೆಯನ್ನು ಹಾಕುವ ಮೊದಲು ಕೃಷಿ ತ್ಯಾಜ್ಯವಸ್ತು ಅಥವಾ ತರಕಾರಿ ತ್ಯಾಜ್ಯವನ್ನು ಬಾಧಿತ ಹೊಲದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಹಾಕುವುದರಿಂದ , ಈ ಪೀಡೆಗಳು ಪದಾರ್ಥಗಳನ್ನು ತಿನ್ನಲು ಬಂದು ಸಾವನ್ನಪ್ಪುತ್ತವೆ.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಗ್ರೂಪ್ ಸೇರಿ 👇
https://chat.whatsapp.com/KgkiwIwv2THC2yeeT1DqYC
ವಿಶೇಷ ಸೂಚನೆ :
ಬಸವನ ಹುಳುಗಳ ನಿಸರ್ಗದಲ್ಲಿ ಶೇ .೭೫ ರಿಂದ ೮೦ ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಹಾಗೂ ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡುತ್ತವೆ . ಆದ್ದರಿಂದ ಬೆಳೆಗಳ ಮೇಲೆ ಹಾವಳಿಯಿದ್ದಾಗ ಮಾತ್ರ ಹತೋಟಿ ಕ್ರಮಗಳನ್ನು ಕೈಗೊಂಡು ನಿಸರ್ಗದ ಸಮತೋಲವನ್ನು ಕಾಪಾಡುವುದು ಅವಶ್ಯಕ . ಯಾವುದೇ ರಾಸಾಯನಿಕದಿಂದ ಈ ಹುಳುಗಳು ಸತ್ತಿದ್ದು ಕಂಡುಬಂದ ತಕ್ಷಣ ಅವುಗಳನ್ನು ಆರಿಸಿ ಆಳವಾಗಿ ನೆಲದಲ್ಲಿ ಹೂಳಬೇಕು . ಇಲ್ಲದಿದ್ದರೆ ಸಾಕು ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಇದರಿಂದ ತೊಂದರೆಯಾಗಬಲ್ಲದು .
ಲೇಖಕರು : ಶ್ರೀ ಅರ್ಜುನ ಸೂಲಗಿತ್ತಿ
(ಸಸ್ಯ ಸಂರಕ್ಷಣೆ) ಐ.ಸಿ.ಎ.ಆರ್ – ಕೃಷಿ ವಿಜ್ಞಾನ ಕೇಂದ್ರ ಇಂಡಿ
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ🌱
ವೆಬ್ಸೈಟ್ನ ಸಂಪರ್ಕದಲ್ಲಿರಿ..