ಪ್ರೀಯ ರೈತರೇ, ವರ್ಷದ ಎಲ್ಲಾ ಕಾಲದಲ್ಲೂ ಹಸಿರುಮೇವಿನ ಲಭ್ಯತೆ ಇಲ್ಲದೆ ಇರುವುದರಿಂದ ರಾಸುಗಳ ನಿರ್ವಹಣೆಯಲ್ಲಿ ಮೆವಿನ ಬಳಕೆ ಅನಿವಾರ್ಯವಾಗಿದೆ . ಸಾಮಾನ್ಯವಾಗಿ ದನಕರುಗಳಿಗೆ ಕೊಡುವ ಒಣ ಮೇವು ಸಂಪೂರ್ಣವಾಗಿ ಶೇಕಡಾ 30-50 ರಷ್ಟು ವ್ಯರ್ಥವಾಗಿ ತಿಪ್ಪೆಗೆ ಅಥವಾ ಉರುವಲಕ್ಕೆ ಸೇರುತ್ತದೆ. ಇದರಿಂದಾಗಿ ಮೇವಿನ ಕೊರತೆ ಮತ್ತಷ್ಟು ಗಂಭೀರವಾಗುತ್ತಿದೆ. ಆದ್ದರಿಂದ ತಾಂತ್ರಿಕ ಜ್ಞಾನ ಬಳಸಿ ರೈತರು ಮೇವಿನ ಕೊರತೆ ನೀಗಿಸಿ ಅಧಿಕ ಲಾಭ ಪಡೆದುಕೊಳ್ಳಬಹುದು
ಒಣ ಮೇವಿನ ಪೌಷ್ಟಿಕರಣದ ವಿಧಾನಗಳು:
* ಮೇವನ್ನು ತುಂಡರಿಸುವುದು
* ಉಪ್ಪಿನ ದ್ರಾವಣದ ಉಪಚಾರ
* ಲವಣ ಮಿಶ್ರಣದ ಉಪಚಾರ
• ಯೂರಿಯಾ ಉಪಚಾರದೊಂದಿಗೆ ಒಣ ಮೇವಿನ ಪೌಷ್ಠಿಕರಣ:
#ಮೇವನ್ನು ತುಂಡರಿಸುವುದು.
ಯಾವದೇ ಮೇವಾಗಲಿ ಅದರ ಪೂರ್ಣ ಸದುಪಯೋಗವಾಗಬೇಕಾದರೆ ಅದನ್ನು ಸಣ್ಣ ಸಣ್ಣಾಗಿ 1-2 ಅಂಗುಲದಷ್ಟು ತುಂಡುಗಳನ್ನಾಗಿ ಕತ್ತರಿಸಬೇಕು. ಹೀಗೆ ಕತ್ತರಿಸುವುದರಿಂದ ದಂಟಿನ ಎಲ್ಲ ಭಾಗಗಳು ಸಮನಾಗಿ ಬೆರೆತುಕೊಳ್ಳುತ್ತವೆ. ಹಸುಗಳಿಗೆ ರವದೆ ಮತ್ತು ದಂಟನ್ನು ಬೇರೆ ಬೇರೆಯಾಗಿ ಆರಿಸಿ ತಿನ್ನಲಿಕ್ಕೆ ಆಗುವುದಿಲ್ಲ. ಅಲ್ಲದೆ ತುಂಡರಿಸಿದ ಮೇವನ್ನು ಹೊಟ್ಟಿನ ಜೊತೆ ಬೆರೆಸಿ ತಿನ್ನಿಸಬಹುದು. ಉದ್ದವಾದ ಮೇವಿಗಿಂತ ಕತ್ತರಿಸಿದ ಮೇವನ್ನು ಗೋದಲಿಯಲ್ಲಿ ಬುಟ್ಟಿಯಲ್ಲಿ ಹಾಕಿ ತಿನ್ನಿಸಲು ಸುಲಭ, ಮೇವನ್ನು ಸಣ್ಣದಾಗಿ ಕತ್ತರಿಸಿ ತಿನ್ನಿಸುವುದರಿಂದ ಶೇಕಡಾ 50 ರಷ್ಟು ಮೇವು ವ್ಯರ್ಥವಾಗಾದೆ ಹಾಳಾಗುವದನ್ನು ತಪ್ಪಿಸಬಹುದು.
#ಉಪ್ಪಿನ/ಬೆಲ್ಲದ ದ್ರಾವಣದ ಉಪಚಾರ:
ಸಣ್ಣದಾಗಿ ತುಂಡರಿಸಿದ ಮೇವು, ಭತ್ತದ ಹುಲ್ಲು ಮತ್ತು ರಾಗಿ ಹುಲ್ಲು ಇವುಗಳಿಗೆ ಉಪ್ಪಿನ ಅಥವಾ ಬೆಲ್ಲದ ದ್ರಾವಣದ ಉಪಚಾರ ಮಾಡಬಹುದು. ಒಣ ಮೇವಿನಲ್ಲಿ ಪೊಷಕಾಂಶಗಳು ಬಹಳ ಕಡಿಮೆ ಇರುತ್ತವೆ ಮತ್ತು ದನಗಳು ತಿನ್ನಲು ಇಷ್ಟಪಡುವುದಿಲ್ಲ. ಉಪ್ಪಿನ ಬೆಲ್ಲದ ದ್ರಾವಣದ ಉಪಚಾರ ಮಾಡಿದಾಗ ಒಣ ಮೇವು ಮೃದುವಾಗುವುದಲ್ಲದೇ ಅದರ ರುಚಿಯೂ ಸಹ ಹೆಚ್ಚುವದು. ಹದಿನೈದು ಲೀಟರ್ ನೀರಿನಲ್ಲಿ ಒಂದೆರಡು ಕಿಲೋ ಉಪ್ಪು/ಬೆಲ್ಲ ಬೆರೆಸಿ 100 ಕಿಲೋ ತುಂಡರಿಸಿದ ಮೇವಿನ ಮೇಲೆ ಸಿಂಪಡಿಸಬೇಕು. ನಂತರ ದನಕರುಗಳಿಗೆ ಹಾಕಬೇಕು.
#ಲವಣ ಮಿಶ್ರಣ ದ್ರಾವಣದ ಉಪಚಾರ:
ಒಣ ಮೇವಿನಲ್ಲಿ ಲವಣಾಂಶಗಳು ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಆದರೆ ಲವಣಗಳು ಹಸುಗಳಿಗೆ ಅತಿ ಆವಶ್ಯಕ (ದೇಹ ಪೋಷಣೆಗೆ, ಬೆಳವಣಿಗೆಗೆ, ಬೆದೆಗೆ ಬರುವುದಕ್ಕೆ ಮತ್ತು ಹಾಲು ಉತ್ಪಾದನೆಗೆ) ಆದ್ದರಿಂದ ಒಣ ಮೇವಿಗೆ ಲವಣಾಂಶಗಳ ಉಪಚಾರ ಒಂದು ಸೂಕ್ತವಾದ ಉಪಾಯ. ಲವಣ ಮಿಶ್ರಣವು ದನಗಳಿಗೆ ಬೇಕಾಗುವ ಎಲ್ಲ ಲವಣಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಹದಿನೈದು ಲೀಟರ್ ನೀರಿನಲ್ಲಿ ಒಂದೆರಡು ಕಿಲೋ ಲವಣ ಮಿಶ್ರಣ ಬೆರೆಸಿ 100 ಕಿಲೋ ತುಂಡರಿಸಿದ ಮೇವಿನ ಮೇಲೆ ಸಿಂಪಡಿಸಬೇಕು ನಂತರ ದನಕರುಗಳಿಗೆ ಹಾಕಬೇಕು.
#ಯೂರಿಯಾ ಉಪಚಾರದೊಂದಿಗೆ ಒಣ ಮೇವಿನ ಪೌಷ್ಠಿಕರಣ:
ರೈತರಿಗೆ ಹೇರಳವಾಗಿ ದೊರಕಬಹುದಾದ ಜೋಳದ ಕಣಿಕೆ ಹಾಗೂ ಗೋಧಿ ಹುಲ್ಲಿನಲ್ಲಿ ಪೋಷಕಾಂಶಗಳು ತೀರ ಕೇಳಮಟ್ಟದಲ್ಲಿದ್ದು, ವಿಶೇಷವಾಗಿ ಪ್ರೊಟೀನ್ ಪ್ರಮಾಣ ಶೇ. 4ಕ್ಕಿಂತಲೂ ಕಡಿಮೆಯಿರುತ್ತದೆ. ಯೂರಿಯಾ ಉಪಚಾರದೊಂದಿಗೆ ಪ್ರೊಟೀನ್ ಪ್ರಮಾಣ ಶೇ. 9 ವರೆಗೆ ಹೆಚ್ಚುತ್ತದೆ. ಇದರಿಂದಾಗಿ ಪಶು ಆಹಾರ ಪೂರೈಕೆಯಲ್ಲಿ ಶೇ. 30 ರಷ್ಟು ಕಡಿಮೆ ಮಾಡಬಹುದು. ಆದರೆ ಇದನ್ನು ವಿಶೇಷ ಸೂಚನೆ : (ಒಂಬತ್ತು ತಿಂಗಳ ವಯಸ್ಸಿಗೆ ಒಳಗಿನ ಕರುಗಳಿಗೆ ತಿನ್ನಿಸಬಾರದು.)
»ಉಪಚರಣೆ ಸಾಮಗ್ರಿಗಳು ಮತ್ತು ಅವುಗಳ ಪ್ರಮಾಣ:
* 100 ಕಿಲೋ ತುಂಡರಿಸಿದ ಮೇವು
* 1 ಕಿಲೋ ಯೂರಿಯಾ
* 15 ಲೀಟರ್ ನೀರು
* ತಾಡಪತ್ರಿ ಅಥವಾ ಪ್ಲಾಸ್ಟಿಕ ಹಾಳೆ
»ಪೌಷ್ಟಿಕರಣಕ್ಕೆ ಒಣಮೇವನ್ನು ಯೂರಿಯಾದೊಂದಿಗೆ ಉಪಚಾರಿಸುವ ವಿಧಾನ:
• 4 ಕಿ.ಗ್ರಾಂಗಳ ಯೂರಿಯಾವನ್ನು 15 ಲೀ. ನೀರಿನಲ್ಲಿ ಕರಗಿಸಿ.
• ಗಟ್ಟಿಯಾದ ನೆಲದ ಮೇಲೆ 3-4 ಇಂಚು ದಪ್ಪನೆಯ ಪದರವಾಗಿ 100 ಕಿ.ಗ್ರಾಂ ಗಳಷ್ಟು ಒಣಮೇವನ್ನು ಹರಡಿ.
• ಗಾರ್ಡನರ್ ಸ್ಪ್ರಿಂಕ್ಲೆರ್ ಬಳಸಿ ಮೇಲಿನಂತೆ ತಯಾರಿಸಲಾದ 15 ಲೀ. ಯೂರಿಯಾ ದ್ರಾವಣವನ್ನು ಮೇವಿನ ಪದರದ ಮೇಲೆ ಚಿಮುಕಿಸಿ ಹರಡಲಾಗಿರುವ ಮೇವಿನ ಪದರವನ್ನು ಕಾಲಿನಿಂದ ಒತ್ತುತ್ತಾ,ಯುರಿಯಾ ದ್ರಾವಣದ ಚಿಮುಕಿಸುವಿಕೆಯನ್ನು ಪುನರಾವರ್ತಿಸಿ.
• ಮೇವಿನ ಪದರದಲ್ಲಿ ಉತ್ಪಾದನೆಯಾದ ಆಮೋನಿಯಾ ಅನಿಲವನ್ನು ಹೊರಹೋಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಯೂರಿಯಾ ಉಪಚರಿಸಲಾದ ಒಣಹುಲ್ಲಿಗೆ ಪ್ಲಾಸ್ಟಿಕ್ ಹಾಳೆಯೊಂದನ್ನು ಹೊದಿಸಿ.
• ಒಂದು ವೇಳೆ ಪ್ಲಾಸ್ಟಿಕ್ ಹಾಳೆ ಲಭ್ಯವಿರದಿದ್ದಲ್ಲಿ ಯೂರಿಯಾ ಪೌಷ್ಠಿಕರಣದ ದ್ರಾವಣ ಉಪಚರಿಸಿದ ಮೇವಿನ ರಾಶಿಯ ಮೇಲೆ ಒಣಮೇವನ್ನು ಹರಡಿ ಅದರ ಮೇಲೆ ಸ್ವಲ್ಪ ಮಣ್ಣನ್ನು ಹಾಕಿ ಆ ಬಳಿಕ ತೇವದ ಮಣ್ಣು ಅಥವಾ ಸಗಣಿ ಬಳಿದು ಗಾಳಿಯಾಡದಂತೆ ನೋಡಿಕೊಳ್ಳಬೇಕು.
ಇದನ್ನು ಓದಿ :
1. ಜಮೀನಿಗೆ ದಾರಿ ಇಲ್ವಾ?? ಪಡೆಯುವುದು ಹೇಗೆ!!
2. ಈ ಕಾರ್ಡ್ ಹೊಂದಿದ್ದರೆ ಮಾತ್ರ ಸರ್ಕಾರದಿಂದ ಸಬ್ಸಿಡಿ ಪಡೆಯಲು ಸಾಧ್ಯ!!
» ಪಾಲಿಸಬೇಕಾದ ಎಚ್ಚರಿಕಾ ಕ್ರಮಗಳು.
#ಯಾವುದೇ ಕಾರಣಕ್ಕೂ ಯೂರಿಯಾವನ್ನು ನೇರವಾಗಿ ಹಸುಗಳಿಗೆ ತಿನ್ನಿಸಬೇಡಿ. ಏಕೆಂದರೆ ಅದು ವಿಷಕಾರಿ.
# ಒಣಮೇವಿನ ಯೂರಿಯಾ ಉಪಚಾರಕ್ಕೆ ಸಿಮೆಂಟ್‌ನಿಂದ ತಯಾರಿಸಲಾದ ನೆಲ ಅತ್ಯುತ್ತಮ. ಒಂದು ವೇಳೆ ನೆಲವು ಮಣ್ಣಿನಿಂದ ಕೂಡಿದ್ದೇ ಆದಲ್ಲಿ ಉಪಚಾರಕ್ಕೆ ಒಣಮೇವಿನ ಪ್ರಥಮ ಪದರವನ್ನು ನೆಲದ ಮೇಲೆ ಹರಡುವ ಮುನ್ನ ಪ್ಲಾಸ್ಟಿಕ್ ಹಾಳೆಯೊಂದನ್ನು ನೆಲದ ಮೇಲೆ ಬಳಸುವುದು ಸೂಕ್ತ.
# ಯೂರಿಯಾ ಉಪಚರಿಸಿದ ಒಣ ಮೇವನ್ನು ಬೇಸಿಗೆಯಲ್ಲಿ ಉಪಚಾರಕ್ಕೊಳಪಟ್ಟ 21 ದಿನಗಳ ಬಳಿಕ ಹಾಗೂ ಚಳಿಗಾಲದಲ್ಲಿ ಉಪಚಾರಕ್ಕೊಳಪಟ್ಟ 28 ದಿನಗಳ ಬಳಿಕವೇ ಬಳಸಲು ಪ್ರಾರಂಭಿಸಬೇಕು. ಯೂರಿಯಾ ಉಪಚರಿಸಿದ ಒಣಹುಲ್ಲನ್ನು ಹಸುಗಳಿಗೆ ಪೂರೈಸುವ ಮೊದಲು ತೆರೆದಿಟ್ಟ ಗಾಳಿಯಲ್ಲಿ ಹರಡಿ ಅದರೊಂದಿಗಿರಬಹುದಾದ ಆಮೋನಿಯಾ ಅನಿಲವನ್ನು ಹೊರಹೋಗುವಂತೆ ಅವಕಾಶ ಮಾಡಿಕೊಡಬೇಕು.
# ಹಸುವು ಯೂರಿಯಾ ಉಪಚರಿಸಿದ ಒಣಮೇವನ್ನು ತಿನ್ನಲು ಕ್ರಮೇಣ ಹೊಂದಿಕೊಳ್ಳುವವರೆಗೆ ಸಣ್ಣ ಪ್ರಮಾಣದಲ್ಲಿ ಪೂರೈಸುವುದು ಸೂಕ್ತ.
ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಕ್ಲಿಕ್ ಮಾಡಿ :👇 https://chat.whatsapp.com/JKdQHb2tEuFGVWVXLOLm9P
»ಯೂರಿಯಾ ಉಪಚಾರದೊಂದಿಗೆ ಒಣ ಮೇವಿನ ಪೌಷ್ಟಿಕರಣದ ಪ್ರಯೋಜನಗಳು:
★ಮೇವು ಹಾಳಾಗುವುದನ್ನು ತಡೆಯಬಹುದು:
ಒಣ ಮೇವು ಸೆಲ್ಯೂಲೋಸ್ ಮತ್ತು ಲಿಗ್ವಿನ್ ಬಾಂಡ್‌ಗಳಿಂದ ಬಂಧಿಯಾಗಿರುವುದರಿಂದ ಒರಟಾಗಿರುತ್ತದೆ(ಗಟ್ಟಿಯಾಗಿರುತ್ತದೆ). ಅಂತಹ ಮೇವು ಸುಲಭವಾಗಿ ಜೀರ್ಣವಾಗದೇ ಇರುವುದರಿಂದ ಹಸುಗಳು ಇಷ್ಟಪಟ್ಟು ತಿನ್ನದೇ ಅನಿವಾರ್ಯವಾಗಿ ಸ್ವಲ್ಪ ಪ್ರಮಾಣವನ್ನು ಮಾತ್ರ ತಿಂದು ಶೇ.50 ರಷ್ಟು ಮೇವು ಹಾಳಾಗುತ್ತದೆ. ಈಗಾಗಲೇ ಒಣ ಮೇವಿಗೂ ಕೊರತೆ ಇರುವುದರಿಂದ ರೈತರು ಬೆಳೆದ ಬೆಳೆಗಳ ಮೇವನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಣೆ ಮಾಡಿ ಸಂಗ್ರಹಿಸಿಟ್ಟು ಹಸುಗಳಿಗೆ ನೀಡುವುದರಿಂದ ಮೇವು ಹಾಳಾಗುವುದನ್ನು ತಡೆಯಬಹುದಾಗಿರುತ್ತದೆ.
★ಹೆಚ್ಚು ಜೀರ್ಣವಾಗುತ್ತದೆ:
ಯೂರಿಯಾ ಮತ್ತು ನೀರನ್ನು ಬಳಸಿ ಒಣ ಮೇವನ್ನು ಸಂಸ್ಕರಣೆ ಮಾಡುವುದರಿಂದ ರಸಾಯನಿಕ ಕ್ರಿಯೆ ನಡೆದು ಆಮೋನಿಯಾ ಅನಿಲ ಮತ್ತು ಆಮೋನಿಯಂ ಹೈಡ್ರಾಕ್ಸೆಡ್ ಉತ್ಪಾದನೆಯಾಗಿ ಮೇವಿನಲ್ಲಿ ಇರುವ ಸೆಲ್ಯೂಲೋಸ್ ಮತ್ತು ಲಿಗ್ನಿನ್ ಬಾಂಡಗಳನ್ನು ಒಡೆದು ಹಾಕುವುದರಿಂದ ಮೇವು ಮೃದುವಾಗಿ ಶೇ.10 ರಿಂದ 15 ಪಟ್ಟು ಹೆಚ್ಚು ಜೀರ್ಣವಾಗುತ್ತದೆ.
★ಸಸಾರಜನಕ ಪ್ರಮಾಣ ಹೆಚ್ಚಾಗುತ್ತದೆ:
ಈ ರೀತಿ ಸಂಸ್ಕರಣೆ ಮಾಡುವುದರಿಂದ ಉತ್ಪಾದನೆಯಾದ ಆಮೋನಿಯಾ ಅನಿಲ ಒಣ ಮೇವಿನೊಂದಿಗೆ ಬೆರೆತು ಸಸಾರಜನಕ ಉತ್ಪಾದನೆಯಾಗುವುದರಿಂದ ಸಂಸ್ಕರಿಸಿದ ಮೇವಿನಲ್ಲಿ ಸಸಾರಜನಕ ಪ್ರಮಾಣ ಶೇ. 6 ರಿಂದ 8 ರಷ್ಟು ಹೆಚ್ಚಾಗುತ್ತದೆ.
★ಮೇವಿನ ಸೇವನೆ ಹೆಚ್ಚಾಗುತ್ತದೆ:
ಸಂಸ್ಕರಿಸಿದ ಒಣ ಮೇವು ಮೃದುವಾಗಿರುವುದರಿಂದ ಹಾಗೂ ಶೇ. 1 ರಷ್ಟು ಅಡಿಗೆ ಉಪ್ಪನ್ನು ಸೇರಿಸುವುದರಿಂದ ಮೇವು ಹೆಚ್ಚು ರುಚಿಕರವಾಗಿ ಮೇವಿನ ಸೇವನೆಯಲ್ಲಿ ಶೇ.50 ರಷ್ಟು ಹೆಚ್ಚಾಗುತ್ತದೆ.
★ಹಾಲು ಉತ್ಪಾದನೆ ಹೆಚ್ಚಾಗುತ್ತದೆ:
ಮೇವಿನ ಸಸಾರಜನಕದ ಪ್ರಮಾಣ ಶೇ. 6 ರಿಂದ 8 ರಷ್ಟು ಹೆಚ್ಚಾಗುವುದರಿಂದ ಹಾಲಿನ ಉತ್ಪಾದನೆಗೆ ಬೇಕಾದ ಸಸಾರಜನಕದ ಪ್ರಮಾಣ ಹೆಚ್ಚು ದೊರೆತು ಉತ್ಪಾದನೆ ಶೇ.10 ರಿಂದ 15 ರಷ್ಟು ಹೆಚ್ಚಾಗುತ್ತದೆ.
★ಸಂಸ್ಕರಿಸಿದ ಒಣ ಮೇವನ್ನು ಹಸುಗಳಿಗೆ ನೀಡುವುದರಿಂದ ಶೇ. 15 ರಿಂದ 20 ರಷ್ಟು ಪಶು ಆಹಾರದ ಬಳಕೆ ಪ್ರಮಾಣವನ್ನು ಕಡಿಮೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ
ಕೃಷಿ ವಾಹಿನಿ 🌱
ವೆಬ್ಸೈಟ್ ನ ಸಂಪರ್ಕದಲ್ಲಿರಿ..