ನಮಸ್ಕಾರ ಪ್ರಿಯ ರೈತ ಭಾಂದವರೇ, ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವು ಕೃಷಿಯಿಂದ ಉದ್ಯಮದ ಕಡೆಗೆ ಸಾಗುತ್ತಿದ್ದರು ಸಹ ಭಾರತದಲ್ಲಿ ಕೃಷಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ. ಇಂದು ನಾವು ಕಬ್ಬು ಮತ್ತು ಅನೇಕ ಬೆಳೆಗಳಲ್ಲಿ ಬಹು ದೊಡ್ಡ ಸಮಸ್ಯೆಯಾಗಿರುವ ಬಿಳಿ ಕಸದ ಬಾಧೆ ಮತ್ತು ಅದರ ನಿಯಂತ್ರಣ ಅಥವಾ ಬಿಳಿ ಕಸದ ಹತೋಟಿ ಕ್ರಮಗಳ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

 

ಬಿಳಿ ಕಸದ ಬೀಜಗಳು ಜಮೀನುಗಳಲ್ಲಿ ಸುಮಾರು 20 ವರ್ಷಗಳ ವರೆಗೆ ಜೀವಂತ ಇರಬಲ್ಲವು. ಈ ಬಿಳಿ ಕಸದ ಬೀಜ ಕೆಂಪು ಜಮೀನುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಬಿಳಿ ಕಸದ ಬೀಜಗಳು ಅತಿ ಸಣ್ಣದಾಗಿರುವದರಿಂದ, ಇವು ಗಾಳಿ ಅಥವಾ ನೀರಿನೊಂದಿಗೆ ಪ್ರಸಾರವಾಗುವ ಸಾಧ್ಯತೆ ಇದೆ.

ಬಿಳಿ ಕಸದಲ್ಲಿ ಕ್ಲೋರಿನ್ ಅಂಶ ಹೆಚ್ಚಾಗಿರುವದರಿಂದ ಅಂತಹ ಕಳೆಗಳನ್ನು ದನಗಳು ತಿನ್ನಲು ಇಷ್ಟ ಪಡುತ್ತವೆ. ಆದ್ದರಿಂದ ಬಿಳಿ ಕಸ ಇರುವ ಹೊಲಗಳಲ್ಲಿ ದನಗಳನ್ನು ಮೇಯಲು ಬಿಡಬಾರದು. ದನಗಳು ಈ ಬಿಳಿ ಕಸದ ಬೀಜಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಸರಿಸುತ್ತವೆ.

 

ಈ ಬಿಳಿ ಕಸಕ್ಕೆ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳು ಇವೆ. ಇದನ್ನು ಹೆಚ್ಚಾಗಿ ಉರಿಮಲ್ಲಿಗೆ ಅಥವಾ ಬಿಳಿಚಿಗನ ಕಸ ಮತ್ತು ಕಾಂಗ್ರೆಸ್ ಗಿಡ ಅಂತಾ ರೂಡಿಯಲ್ಲಿ ಕರೆಯುತ್ತಾರೆ. ಇದು ತೃಣ ಧಾನ್ಯಗಳನ್ನು ಕೊಲ್ಲುವ ಅತೀ ಮುಖ್ಯ ಕಳೆಯಾಗಿದೆ. ಕಳೆಗಳೆಂದರೆ ಮುಖ್ಯ ಬೆಳೆಯೊಂದಿಗೆ ಭೂಮಿಯಲ್ಲಿರುವ ತೇವಾಂಶ ಹಾಗೂ ಪೋಷಕಾಂಶಗಳೊಂದಿಗೆ ಸ್ಪರ್ಧೆಯೊಡ್ಡಿ, ಮುಖ್ಯ ಬೆಳೆಯ ಇಳುವರಿ ಹಾಗೂ ಬೆಳವಣಿಗೆ ಕುಂಟಿತಗೊಳಿಸಿ ಹಾಗೂ ಉಪಟಳ ಕೊಡುವ ಹಾಗೂ ಅನಾವಶ್ಯಕವಾಗಿ ಬೆಳೆಯುವ ಬೆಳೆ ಆಗಿರುತ್ತವೆ.

ಇಂತಹ ಅನಾವಶ್ಯಕ ಬೆಳೆಗಳಿಂದ ರೈತರಿಗೆ ಯಾವದೇ ರೀತಿಯ ಪ್ರಯೋಜನ ಆಗುವುದಿಲ್ಲ.ಅದೇ ರೀತಿಯಾಗಿ ಕೆಲವೊಂದು ಕಳೆಗಳು ಬೆಳೆಗಳಲ್ಲಿ ಕೀಟ ಹಾಗೂ ರೋಗ ಭಾದೆಯನ್ನು ಹರಡುತ್ತವೆ. ತೃಣ ಧಾನ್ಯಗಳ ಮೇಲೆ ಪರಾವಲಂಬಿಯಾಗಿ ಬೆಳೆಯುವ ಕಸವೆಂದರೆ ಬಿಳಿ ಕಸ.

 

ಈ ಕಸ ಮುಖ್ಯ ಪೈರುಗಳಿಂದ (ಮುಖ್ಯ ಬೆಳೆ) ಹೀರಲ್ಪಡುವ ತೇವಾಂಶ ಮತ್ತು ಪೋಷಕಾಂಶಗಳನ್ನು ಉಪಯೋಗಿಸಿಕೊಂಡು, ಮುಖ್ಯ ಪೈರಿನ ಅಥವಾ ಮುಖ್ಯ ಬೆಳೆಯ ಬೆಳವಣಿಗೆ ಮತ್ತು ಇಳುವರಿಗಳನ್ನು ಗಣನೀಯ ಪ್ರಮಾಣದಲ್ಲಿ ಕುಂಠಿತ ಮಾಡುತ್ತದೆ. ದೂರದಿಂದ ನೋಡಿದಾಗ ಇಂಥ ಕಸ ಪರಾವಲಂಬಿ (Parasite) ಎಂದು ಗುರುತಿಸುವದು ಕಷ್ಟ ಆಗುತ್ತದೆ. ಆದರೆ ಮುಖ್ಯ ಬೆಳೆಯ ಬೇರುಗಳನ್ನು ಪರೀಕ್ಷಿಸಿದಾಗ, ಈ ಬಿಳಿ ಕಸವು ತನ್ನ ಬೇರುಗಳನ್ನು (Hostoria) ಮುಖ್ಯ ಬೆಳೆಯ ಬೇರುಗಳಲ್ಲಿ ಪಸರಿಸಿ, ಅಲ್ಲಿಂದ ತೇವಾಂಶ ಮತ್ತು ಪೋಷಕಾಂಶಗಳನ್ನು ಹೀರುತ್ತದೆ.

 

ಈ ಕಸ ಅತೀ ಮುಖ್ಯವಾಗಿ ತೃಣ ಧಾನ್ಯಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ಇಲ್ಲಿಯವರೆಗೆ ಈ ಕಸದಲ್ಲಿ 35 ರೀತಿಯ ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 11 ಪ್ರಭೇದಗಳು ಮುಖ್ಯವಾಗಿವೆ. ಈ 11 ಪ್ರಭೇದಗಳಲ್ಲಿ ಸ್ಟ್ರೈಗಾ ಎಸಿಯಾಟಿಕಾ (Striga asiatica) ನಮ್ಮ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

 

# ಈ ಬಿಳಿ ಕಸದಿಂದ ಹಾನಿಗೀಡಾಗುವ ಬೆಳೆಗಳು ಯಾವವು? ಎಂಬುದನ್ನು ನೋಡುವುದಾದರೆ,

 

ಜಮೀನುಗಳಲ್ಲಿ ಅಥವಾ ಹೊಲಗಳಲ್ಲಿ ತೃಣ ಧಾನ್ಯಗಳಾದ ಜೋಳ, ಸಜ್ಜೆ, ಗೋವಿನ ಜೋಳ, ರಾಗಿ, ಭತ್ತ, ಕಬ್ಬು, ಸಾವೆ, ಬರಗು, ಊದಲು, ಹಾರ್ಕ ಮತ್ತು ಹುಲ್ಲುಗಳ ಪ್ರಭೇದಗಳಲ್ಲಿ ಈ ಕಸ ಎದ್ದು ಹೆಚ್ಚಾಗಿ ಕಂಡು ಬರುತ್ತದೆ. ಈ ಬಿಳಿ ಕಸದ ಭಾದೆಯಿಂದ ಮುಖ್ಯ ಬೆಳೆಗಳ ಇಳುವರಿ ಸುಮಾರು ಶೇಕಡಾ 50 ರಿಂದ 90 ರಷ್ಟು ಕುಂಠಿತಗೊಳ್ಳಬಹುದು ಇಳುವರಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜಮೀನುಗಳಲ್ಲಿ ತೇವಾಂಶ ಇದ್ದಾಗಲೂ ಸಹ ಮುಖ್ಯ ಬೆಳೆಗಳ ಎಲೆಗಳು ಬಾಡಿದಂತೆ ಅಥವಾ ಒಣಗಿದಂತೆ ಕಾಣುತ್ತವೆ. ಬೆಳವಣಿಗೆಯಲ್ಲಿ ವಿವಿಧ ಬಾಧೆ ಕಾಣಬಹುದು. ಕೆಲವೊಂದು ಸಲ ತೃಣ ಧಾನ್ಯಗಳಿಂದ ಹೊಡೆ ಹೊರಗೆ ಬರಲಾರದು.

 

• ಬೀಜ ಪ್ರಸಾರ:

 

ಈ ಬಿಳಿ ಕಸದ ಬೀಜಗಳು ಅತೀ ಸಣ್ಣದಾಗಿದ್ದು, ಪೂರ್ತಿ ಹೂವಾಗುವ ಒಂದು ಬಿಳಿಕಸದ ಪೈರು ಅಂದಾಜು 1 ರಿಂದ 5 ಲಕ್ಷ ಬೀಜ ಉತ್ಪಾದನೆ ಮಾಡುತ್ತದೆ. ಇದರಿಂದಾಗಿ ಒಂದು ಎಕರೆ ಜಮೀನುಗಳಲ್ಲಿ 6 ರಿಂದ 7 ಕೋಟಿ ಬೀಜ ಇರಬಹುದುದೆಂದು ಅಂದಾಜಿಸಲಾಗುತ್ತದೆ. ಇಂತಹ ಬಿಳಿ ಕಸದ ಬೀಜಗಳು ಜಮೀನುಗಳಲ್ಲಿ ಸುಮಾರು 20 ವರ್ಷಗಳವರೆಗೆ ಜೀವಿತ ಇರಬಹುದು ಎಂದು ಅಂದಾಜಿಸಲಾಗಿದೆ. ಬಿಳಿ ಕಸದ ಬೀಜ ಕೆಂಪು ಮಣ್ಣಿನ ಜಮೀನುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಬೀಜ ಅತೀ ಸಣ್ಣದಾಗಿರುವದರಿಂದ ಇವು ಗಾಳಿ ಅಥವಾ ನೀರಿನೊಂದಿಗೆ ಪ್ರಸಾರವಾಗುವ ಸಾಧ್ಯತೆ ಇದೆ. ಬಿಳಿಕಸದಲ್ಲಿ ಕ್ಲೋರಿನ್ ಅಂಶ ಹೆಚ್ಚಾಗಿರುವದರಿಂದ ದನಗಳು ತಿನ್ನಲು ಇಷ್ಟ ಪಡುತ್ತವೆ. ಆದ್ದರಿಂದ ಬಿಳಿಕಸ ಇರುವ ಹೊಲಗಳಲ್ಲಿ ದನಗಳನ್ನು ಮೇಯಲು ಬಿಡಬಾರದು.

 

• ಬಿಳಿಕಸದ ಜೀವನ ಚಕ್ರ:

ಈ ಕಸದ ಬೀಜ ಮೊಳಕೆಯಾದ ನಂತರ ತನ್ನ ವಿಶಿಷ್ಟ ಬೇರನ್ನು (ಹಿಸ್ಟೋರಿಯಾ- historia) ಮೂಲ ಬೆಳೆಯ ಅಥವಾ ಮುಖ್ಯ ಬೆಳೆಯ ಬೇರಿನಲ್ಲಿ ಪಸರಿಸಿ ಅಲ್ಲಿಂದ ಹೀರಲ್ಪಡುವ ತೇವಾಂಶ ಹಾಗೂ ಪೋಷಕಾಂಶಗಳನ್ನು ಈ ಬಿಳಿ ಕಸವು ಹೀರುತ್ತದೆ.

ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಈ ಕಸಕ್ಕೆ 1 ರಿಂದ 2 ತಿಂಗಳು ಬೇಕು. ನಂತರ ಹೂ ಬಿಡಲು ಒಂದು ತಿಂಗಳು ಬೇಕಾಗುತ್ತದೆ. ತದನಂತರ ಬೀಜ ತಯಾರಾಗಲು ಒಂದು ತಿಂಗಳ ಸಮಯ ಬೇಕಾಗುತ್ತದೆ. ಈ ಪ್ರಕಾರ 3-4 ತಿಂಗಳ ಸಮಯದಲ್ಲಿ ಈ ಕಸ ತನ್ನ ಜೀವನ ಚಕ್ರವನ್ನು ಮುಗಿಸುತ್ತದೆ. ಬೀಜ ಪ್ರಸಾರದ ನಂತರ ತಾನಾಗಿಯೇ ಈ ಕಸ ಒಣಗಿ ಹೋಗುತ್ತದೆ. ಮೇಲ್ಕಾಣಿಸಿದ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಪ್ರಸಾರವಾಗಿ ಈ ಕಸ ಇನ್ನೂ ಹೆಚ್ಚಿನ ಉಪಟಳವನ್ನು ಕೊಡುವ ಸಾಧ್ಯತೆ ಇದೆ.

 

• ಈ ಬಿಳಿ ಕಸದ ಹತೋಟಿ ಕ್ರಮಗಳು:

 

ಈ ಕಸದ ಹತೋಟಿ ಮಾಡಲು ಒಂದೇ ಒಂದು ವಿಧಾನದಿಂದ ಸಾಧ್ಯವಿಲ್ಲ. ಇದಕ್ಕಾಗಿ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸಮಗ್ರ ಹತೋಟಿ ಕ್ರಮಗಳನ್ನು ಕೆಳಗೆ ಕೊಡಲಾಗಿದೆ.

 

1) ಬೀಜ ಬಿಡುವ ಮೊದಲೇ ಕಸವನ್ನು ನಾಶಪಡಿಸುವದು:

ಯಾವದೇ ಕಸವನ್ನು (ಕಳೆ) ಜಮೀನುಗಳಲ್ಲಿ ನಾಶ ಮಾಡದೇ ಬಿಟ್ಟರೆ ಅವುಗಳಿಂದ ಉತ್ಪತ್ತಿಯಾಗುವ ಬೀಜ ಪ್ರಸಾರವಾಗಿ ಮುಂದೆ ಏಳು ವರ್ಷಗಳವರೆಗೆ ಕಸದ ಹತೋಟಿ ಸಂಪೂರ್ಣವಾಗಲಾರದು ಅನ್ನುವ ಮಾತು ನಮ್ಮ ರೈತಾಪಿ ಜನರಿಗೆಲ್ಲಾ ಗೊತ್ತಿದ್ದ ವಿಷಯ. ಆದ ಕಾರಣ ಕಳೆಗಳನ್ನು ಹತೋಟಿಯಲ್ಲಿ ಇಡಬೇಕಾದರೆ, ಅವುಗಳನ್ನು ಬೀಜ ಆಗುವ ಮೊದಲೇ ನಾಶ ಪಡಿಸಬೇಕು. ಬರೇ ನಾಶ ಪಡಿಸುವದೆಂದರೆ ಕಿತ್ತು ಅಲ್ಲಿಯೇ ಬಿಡಬಾರದು. ಅವುಗಳನ್ನು ಸುಟ್ಟು ಹಾಕಬೇಕು. ಇಂಥ ವಿಧಾನ ಅನುಸರಿಸಲು ಸುಲಭ.

 

2) ಹಿಡಿ ಬೆಳೆಗಳನ್ನು ಬೆಳೆಯುವದು (Catch Crops):

ಕೆಲವೊಂದು ಬೆಳೆಗಳ ಬೇರಿನಿಂದ ಉತ್ಪತ್ತಿಯಾಗುವ ರಾಸಾಯನಿಕ ದ್ರವಗಳಿಂದ ಬಿಳಿ ಕಸದ ಬೀಜಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಳಕೆಯಾಡುತ್ತವೆ. ಆದರೆ ಅಂಥ ಬೆಳೆಗಳು ಈ ಕಸದ ಬಾಧೆಗೆ ತುತ್ತಾಗುತ್ತವೆ. ಆದರೂ ಸಹ ಅಂಥ ಬೆಳೆಗಳನ್ನು ಇಳುವರಿಗಾಗಿ ಬೆಳೆಯದೇ ಮೇವಿಗಾಗಿ ಬೆಳೆಯಬಹುದು. ಇಂಥ ಬೆಳೆಗಳಿಗೆ ಹಿಡಿ ಬೆಳೆಗಳೆಂದು ಕರೆಯುತ್ತಾರೆ. ಮೇವಿಗಾಗಿ ಗೋವಿನ ಜೋಳ, ಜೋಳ, ಸಜ್ಜೆ ಮತ್ತು ಹುಲ್ಲುಗಳನ್ನು ಬೆಳೆಯಬಹುದು. ಈ ಹಿಡಿ ಬೆಳೆಗಳನ್ನು 70 ರಿಂದ 80 ದಿನಗಳಲ್ಲಿ ಕಟಾವು ಮಾಡಬೇಕು. ಯಾಕೆಂದರೆ ಬಿಳಿಕಸ ಹುಟ್ಟಿಕೊಂಡು ಬೀಜವಾಗುವ ಮೊದಲೇ ಈ ಹಿಡಿ ಬೆಳೆಗಳನ್ನು ಕಟಾವು ಮಾಡುವದರಿಂದ, ಈ ಕಸಕ್ಕೆ ಪರಾವಲಂಬಿ ಬೆಳೆ ಸಿಗದೇ ಹೋಗುವದರಿಂದ, ಕಸ ಒಣಗಿ ತಾನೇ ನಾಶ ಹೊಂದುತ್ತದೆ. ಆರ್ಥಿಕ ಇಳುವರಿಗಾಗಿ ಬೆಳೆಗಳನ್ನು ಬೆಳೆಯುವದಾದರೆ ಈ ಪದ್ಧತಿ ಅನುಸರಿಸಬಾರದು.

 

3) ಬಲೆ ಬೆಳೆ ಬೆಳೆಯುವದು:

ದ್ವಿದಳ ಮತ್ತು ಎಣ್ಣೆ ಕಾಳುಗಳ ಜಾತಿಗೆ ಸೇರಿದ ಬೆಳೆಗಳನ್ನು ಬೆಳೆಯುವದರಿಂದ ಈ ಕಸದ ಹತೋಟಿ ಮಾಡಬಹುದು. ಈ ಬೆಳೆಗಳಿಂದ ಉತ್ತೇಜನಕಾರಿಯಾಗುವ ರಾಸಾಯನಿಕಗಳು ಹೊರ ಹೊಮ್ಮುವಿಕೆಯಿಂದ ಬಿಳಿ ಕಸದ ಬೀಜ ಮೊಳಕೆಯೊಡೆದು, ಅವುಗಳ ಬೇರು ಬಲೆ ಬೆಳೆಗಳ ಬೇರುಗಳ ಒಳಗೆ ಪಸರಿಸಲು ಪ್ರಯತ್ನಿಸುತ್ತವೆ. ಆದರೆ ಪರಾವಲಂಬಿ ಕಸದ ಹಿಸ್ಟೋರಿಯಾಗಳಿಂದ ಇದು ಸಾಧ್ಯವಾಗುವದಿಲ್ಲ. ಆದ್ದರಿಂದ ಮೊಳಕೆಯೊಡೆದು ಕಸ ತನ್ನಷ್ಟಕ್ಕೆ ತಾನೇ ನಾಶವಾಗುತ್ತದೆ.

 

4) ಕಾಲುಗೈ ಪದ್ಧತಿ ಅನುಸರಿಸುವದು:

ಈ ಕಸದ ಬಾಧೆ ಜಮೀನುಗಳಲ್ಲಿ ಹೆಚ್ಚಾಗಿ ಕಂಡು ಬಂದರೆ ಬೆಳೆಯ ಕಾಲುಗೈ ಮಾಡುವುದು ತುಂಬಾ ಉಪಯುಕ್ತ ಪದ್ಧತಿ. ತೃಣ ಧಾನ್ಯಗಳಿಗೆ ಸೇರಿದ ಬೆಳೆಗಳಾದ ಜೋಳ, ಸಜ್ಜೆ, ಭತ್ತ, ಕಬ್ಬು, ಗೋವಿನ ಜೋಳ, ನವಣಿ, ರಾಗಿ, ಹಾರ್ಕ ಮತ್ತು ಬರಗು ಇನ್ನಿತರ ಎಕದಳ ಧಾನ್ಯಗಳನ್ನು ಕನಿಷ್ಠ 3 ರಿಂದ 4 ವರ್ಷ ಬೆಳೆಯಬಾರದು. ಇವುಗಳ ಬದಲಾಗಿ ಎಣ್ಣೆಕಾಳು ಅಥವಾ ದ್ವಿದಳ ಜಾತಿಗೆ ಸೇರಿದ ಬೆಳೆಗಳನ್ನು ಬೆಳೆಯಬೇಕು.

 

5) ಭೂ ಫಲವತ್ತತೆಯನ್ನು ಕಾಯ್ದುಕೊಳ್ಳುವದು:

ಕಡಿಮೆ ಫಲವತ್ತತೆ ಇರುವ ಜಮೀನುಗಳಲ್ಲಿ ಈ ಕಸದ ಉಪಟಳ ಹೆಚ್ಚಾಗಿ ಕಂಡು ಬರುತ್ತದೆ. ಫಲವತ್ತಾದ ಜಮೀನುಗಳಲ್ಲಿ ಮತ್ತು ಸಾರಜನಕದ ಪ್ರಮಾಣ ಹೆಚ್ಚಾಗಿರುವ ಹೊಲಗಳಲ್ಲಿ ಈ ಕಸ ಕಡಿಮೆ ಇರುವದು. ಆದ್ದರಿಂದ ಹೆಚ್ಚು ಪ್ರಮಾಣದಲ್ಲಿ ಸಾರಜನಕ ಗೊಬ್ಬರ ಕೊಡುವುದರಿಂದ ಈ ಕಸದ ಬಾಧೆಯನ್ನು ಕಡಿಮೆ ಮಾಡಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಕೀಡೆಗಳ ಹಾವಳಿ ಹೆಚ್ಚಿಸಬಹುದು. ಆದ್ದರಿಂದ ಜಮೀನುಗಳಲ್ಲಿ ಹೆಚ್ಚು ಹೆಚ್ಚಾಗಿ ಸಾವಯವ ಗೊಬ್ಬರಗಳನ್ನು ಕೊಟ್ಟು ಫಲವತ್ತತೆಯನ್ನು ಕಾಪಾಡಬೇಕು.

 

» ಕಳೆನಾಶಕಗಳ ಬಳಕೆ:

ಬೆಳೆಗಳನ್ನು ಬಿತ್ತಿದ 40 ರಿಂದ 50 ದಿನಗಳಲ್ಲಿ ಈ ಕಳೆ ಹುಟ್ಟಿ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಇಂಥ ಸಮಯದಲ್ಲಿ 2,4 – D ಸೋಡಿಯಂ ಉಪ್ಪು (ಶೇ.80ರ) ಪ್ರತಿ ಹೆಕ್ಟೇರಿಗೆ ಒಂದು ಕಿಲೋದಂತೆ 270 ರಿಂದ 360 ಲೀಟರ ನೀರಿನಲ್ಲಿ ಬೆರೆಸಿ ಕಸದ ಮೇಲೆ ಸಿಂಪರಿಸಬೇಕು. ಇದರಂತೆ ಪ್ಯಾರಾಕ್ವಾಟ್‌ 1.25 ಲೀಟರ ಪ್ರತಿ ಹೆಕ್ಟೇರಿಗೆ ಸಿಂಪರಿಸುವದರಿಂದ ಈ ಕಳೆಯ ಹತೋಟಿ ಮಾಡಬಹುದು. ಈ ಕಳೆ ಹೂವಾಡುವ ಮೊದಲೇ ಸಿಂಪರಣೆ ಮಾಡುವುದು ಅತೀ ಮುಖ್ಯ. ಕಳೆನಾಶಕಗಳು ಆದಷ್ಟು ಮುಖ್ಯ ಬೆಳೆಗೆ ತಗಲದಂತೆ ನೋಡಿಕೊಳ್ಳಬೇಕು. ಬೇರೆ ಬೆಳಗೆ ತಗುಲಿದಲ್ಲಿ ಅದು ಸ್ವಲ್ಪ ಮಂಕು ಬೀಳುತ್ತದೆ.

 

» ಜೈವಿಕ ಪದ್ಧತಿ:

ಕೆಲವೊಂದು ಕೀಟಗಳು ಬಿಳಿ ಕಸದ ಮೊಗ್ಗು ಮತ್ತು ಹೂಗಳನ್ನು ತಿಂದು ಈ ಕಸವನ್ನು ನಾಶ ಪಡಿಸುತ್ತವೆ. ಇದರಿಂದ ಈ ಕಳೆ ಬೀಜ ಪ್ರಸಾರ ಬಹಳಷ್ಟು ಕಡಿಮೆ ಮಾಡಬಹುದು. ಕೆಲವೊಂದು ಜಾತಿಯ ಪಾತರಗಿತ್ತಿಗಳಿಂದಲೂ ಸಹ ಈ ಕಳೆಯನ್ನು ನಾಶ ಪಡಿಸಬಹುದೆಂದು ಗೊತ್ತಾಗಿದೆ. ಆದರೂ ಸಹ ಜೈವಿಕ ಪದ್ಧತಿಗಳು ಅಷ್ಟೊಂದು ಪ್ರಚಲಿತದಲ್ಲಿಲ್ಲ ಮತ್ತು ಪರಿಣಾಮಕಾರಿ ಆಗುವುದಿಲ್ಲ.

 

» ಬಿಳಿ ಕಸ ನಿರೋಧಕ ಶಕ್ತಿ ಪಡೆದ ಬೆಳೆ ಮತ್ತು                                        ತಳಿಗಳ ಆಯ್ಕೆ:

ಕೆಲವೊಂದು ಬೆಳೆಗಳು ಈ ಬಿಳಿ ಕಳೆಗೆ ನಿರೋಧಕ ಶಕ್ತಿ ಹೊಂದಿವೆ. ಅಂಥಾ ಬೆಳೆಗಳನ್ನು ಬೆಳೆಯಬಹುದು. ಇದಲ್ಲದೇ ತೃಣ ಧಾನ್ಯಗಳ ಬೆಳೆಗಳಲ್ಲಿ, ಮುಖ್ಯವಾಗಿ ಕಬ್ಬು ಬೆಳೆಯಲ್ಲಿ CO-91010 ಜಾತಿಯ ತಳಿಯು ಈ ಕಸಕ್ಕೆ ನಿರೋಧಕ ಶಕ್ತಿ ಹೊಂದಿದೆ. ಇಂಥ ತಳಿಯನ್ನು ನಾಟಿ ಮಾಡುವದರಿಂದ ಬೆಳೆಯ ಇಳುವರಿ ಕುಂಠಿತಗೊಳ್ಳುವದಿಲ್ಲ.

 

ರೈತರು ತಮ್ಮ ಹೊಲಗಳಲ್ಲಿ ಅಥವಾ ಜಮೀನುಗಳಲ್ಲಿ ಈ ಬಿಳಿ ಕಸದ ಭಾದೆ ಹೆಚ್ಚಾದರೆ ಈ ಮೇಲೆ ಹೇಳಿರುವ ಸಮಗ್ರ ನಿರ್ವಹಣೆ ಅಥವಾ ಹತೋಟಿ ಕ್ರಮಗಳನ್ನು ಕಾರ್ಯ ರೂಪಕ್ಕೆ ತಂದು ಬಿಳಿ ಕಸದ ನಿರ್ವಹಣೆಯನ್ನು ಮಾಡಬಹುದು. ರೈತರು ಇದರ ಲಾಭವನ್ನು ಪಡೆದುಕೊಂಡು ಬೆಳೆಗಳ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು.

ಹೆಚ್ಚಿನ ಬಿಳಿ ಕಸವನ್ನು ಸಮಗ್ರ ನಿರ್ವಹಣೆ ಮಾಡುವುದಾದರೆ ಈ ಮೇಲ್ಕಂಡ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *