ಪ್ರೀಯ ರೈತರೇ, ಇಂದು ನಾವು ದ್ರಾಕ್ಷಿ ಬೆಳೆಯಲ್ಲಿ ಬರುವ ಸಮಗ್ರ ಬೇಸಾಯ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳೋಣ. ದ್ರಾಕ್ಷಿ ಹೆಚ್ಚು ರುಚಿಕರವಾದ, ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ಒದಗಿಸಬಲ್ಲ ಹಣ್ಣಿನ ಬೆಳೆಯಾಗಿದ್ದು, ಇದು ಸುಲಭವಾಗಿ ಜೀರ್ಣವೂ ಆಗುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಇವೆ.

# ಮಣ್ಣು :

ದಾಕ್ಷಿಯನ್ನು ವಿವಿಧ ತರಹದ ಮಣ್ಣಿನಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಅತ್ಯುತ್ತಮ. ಕಡಿಮೆ ಆಳದ ಮಧ್ಯಮ ಕಪ್ಪು ಗೋಡು ಮಣ್ಣು, ಸ್ವಲ್ಪ ಭಾಗ ಸುಣ್ಣದ ಅಂಶವಿದ್ದರೂ ದ್ರಾಕ್ಷಿಯನ್ನು ಬೆಳೆಯಬಹುದು. ಆಳವಾದ ಮರಳು ಮಿಶ್ರಿತ ಗೋಡು ಮಣ್ಣು ಕೂಡಾ ಈ ಬೆಳೆಗೆ ಸೂಕ್ತ.

 

# ಹವಾಗುಣ ಮತ್ತು ನಾಟಿ ಕಾಲ :

ದ್ರಾಕ್ಷಿ ಉಷ್ಣವಲಯದ ಬೆಳೆ. ಹಣ್ಣು ಬಿಡುವ ಕಾಲದಲ್ಲಿ ಇದಕ್ಕೆ ಮಳೆ ಇಲ್ಲದ ಶುಷ್ಕ ಹವಾಗುಣ ಅಗತ್ಯ. ಹೂವು ಬಿಟ್ಟ ನಂತರ ಹಣ್ಣು ಆಗುವವರೆಗಿನ ಕಾಲದಲ್ಲಿ ಮಳೆಯಾದರೆ ಇದನ್ನು ಬಾಧಿಸುವ ರೋಗಗಳು ವೃದ್ಧಿಯಾಗುತ್ತವೆ. ಅಕ್ಟೋಬರ್ ತಿಂಗಳ ಎರಡನೇ ಭಾಗದಿಂದ ಜನೇವರಿ ತಿಂಗಳವರೆಗಿನ ಕಾಲ ನಾಟಿಗೆ ಸೂಕ್ತ.

 

# ಸೂಕ್ತ ತಳಿಗಳು:

ದ್ರಾಕ್ಷಿಯಲ್ಲಿ ಅನೇಕ ತಳಿಗಳಿದ್ದು, ಈ ಕೆಳಗಿನವು ಜನಪ್ರಿಯವಾಗಿವೆ.

 

• ಥಾಮ್ಸನ್ ಸೀಡ್ಸ್ ಲೆಸ್:

ಇದು ಸಣ್ಣದಾದ, ಗುಂಡನೆಯ ಹಳದಿ ಮಿಶ್ರಿತ ಹಣ್ಣುಗಳುಳ್ಳ ತಳಿ, ಹಣ್ಣುಗಳಲ್ಲಿ ಬೀಜಗಳಿರುವುದಿಲ್ಲ. ತಿನ್ನಲು ಬಹಳ ಅತ್ಯುತ್ತಮವಾದ ತಳಿ. ಗೊಂಚಲುಗಳು ಸಾಧಾರಣ ಗಾತ್ರವಿದ್ದು, ಹಣ್ಣುಗಳು ಒತ್ತಾಗಿರುತ್ತವೆ. ಈ ತಳಿಯು ಒಣ ದ್ರಾಕ್ಷಿ ತಯಾರಿಸಲು ಯೋಗ್ಯವಾಗಿದೆ.

• ಸೋನಾಕಾ :

ಇದು ಥಾಮ್ಸನ್ ಸೀಡ್‌ ಲೆಸ್ ತಳಿಯಿಂದ ಅಭಿವೃದ್ಧಿಪಡಿಸಿದ ತಳಿಯಾಗಿದ್ದು ಅಧಿಕ ಇಳುವರಿ ಕೊಡಬಲ್ಲದು. ಹಣ್ಣುಗಳು ಉದ್ದವಾಗಿದ್ದು, ರುಚಿಕರವಾಗಿಯು ಮತ್ತು ಬೀಜ ರಹಿತವಾಗಿಯೂ ಇರುತ್ತವೆ.

• ಪ್ಲೇಮ್ ಸೀಡ ಲೆಸ್ :

ಇದು ಮಧ್ಯಮ ಗಾತ್ರದ ಗೊಂಚಲುಗಳನ್ನು ಹೊಂದಿದ್ದು, ತಿಳಿಗೆಂಪು ವರ್ಣದ, ಅತ್ಯುತ್ತಮ ಸುವಾಸನೆಯುಳ್ಳ, ರುಚಿಕರವಾದ ಗಟ್ಟಿ ಹಣ್ಣುಗಳನ್ನು ಹೊಂದಿದೆ. ಹಣ್ಣುಗಳನ್ನು ತಾಜಾ ರೂಪದಲ್ಲಿ ತಿನ್ನಲು ಅಥವಾ ಒಣ ದ್ರಾಕ್ಷಿ ತಯಾರಿಸಲು ಉಪಯೋಗಿಸಬಹುದು. ಇದು ಹೆಚ್ಚು ಉಷ್ಣಾಂಶ ಬಯಸುವ ತಳಿಯಾಗಿದ್ದು, ಥಾಮ್ಸನ್ ಸೀಡ್ಸ್‌ ತಳಿಗಿಂತ ಬೇಗ ಮಾಗುವುದು. ಅಧಿಕ ಇಳುವರಿ ನೀಡುವ ಶಕ್ತಿಯುತ ತಳಿ ಇದಾಗಿದೆ.

• ದಿಲ್‌ ಕುಷ್ :

ಇದನ್ನು ಅನಾಬ್ – ಇ – ಷಾಹಿ ತಳಿಯಿಂದ ಆಯ್ಕೆ ಮಾಡಲಾಗಿದೆ. ಈ ತಳಿಯ ಹಣ್ಣುಗಳು ಬಹಳ ಉದ್ದವಾಗಿದ್ದು, ಅತಿ ಆಕರ್ಷಣೆಯಿಂದ ಕೂಡಿರುತ್ತವೆ. ಹಾಗೂ ಅಧಿಕ ಇಳುವರಿ ಕೊಡಬಲ್ಲದು. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ

• ಶರದ್ ಸೀಡ್‌ಲೆಸ್ :

ಕಡುನೀಲಿ ಬಣ್ಣ ಹೊಂದಿದ ಬೀಜರಹಿತ ತಳಿ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಕೊಡಬಲ್ಲದಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿದೆ.

 

# ಬೇಸಾಯ ಸಾಮಗ್ರಿಗಳು:

» ಇತ್ತೀಚಿನ ದಿನಗಳಲ್ಲಿ ನಾಟಿ ಅಂತರವನ್ನು ಕಡಿಮೆಗೊಳಿಸಿ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡಿ ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಆರಂಭದ ವರ್ಷಗಳಲ್ಲಿ ಪಡೆಯುವ ವಾಡಿಕೆ ಬಳಕೆಯಲ್ಲಿದೆ.

» ದ್ರಾಕ್ಷಿ ಬೆಳೆಯಲು ಪ್ರದೇಶದ ಆಯ್ಕೆ ಮತ್ತು ಲೇಔಟ್ ಸಲುವಾಗಿ ತೋಟಗಾರಿಕೆ ತಜ್ಞರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

 

# ಸಾವಯವ ಗೊಬ್ಬರಗಳು:

ನಾಟಿಯ ಸಮಯದಲ್ಲಿ ಪ್ರತಿ ಬಳ್ಳಿಗೆ 20 ಕಿ .ಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು ನಂತರ ಪ್ರತಿ ವರ್ಷ ಪ್ರತಿ ಬಳ್ಳಿಗೆ 20 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರ ಕೊಡಬೇಕು. ಬೇವಿನ ಹಿಂಡಿ, ಎರೆಹುಳು ಗೊಬ್ಬರ ಹಾಗೂ ಬೋನ್ ಮೀಲ್ (ಎಲುಬಿನ ಗೊಬ್ಬರ) ಇತ್ಯಾದಿ ಮಿಶ್ರಣವನ್ನು (1 ಕಿಲೋ) ಕೊಟ್ಟಿಗೆ ಗೊಬ್ಬರ ಜೊತೆಗೆ ಸೇರಿಸಬೇಕು.

 

# ಬೇಸಾಯ ಕ್ರಮಗಳು:

1) ಸಸ್ಯಾಭಿವೃದ್ಧಿ:

› ಕಡ್ಡಿಗಳಿಂದ :

ಸುಮಾರು ಆರು ತಿಂಗಳ ಕಾಲ ಬೆಳೆದ ಬಲಿತ 4-6 ಕಣ್ಣುಗಳುಳ್ಳ ಕಡ್ಡಿಯನ್ನು ಸಸ್ಯಾಭಿವೃದ್ಧಿಗಾಗಿ ಬಳಸುತ್ತಾರೆ. ಎರಡು ಗಣ್ಣುಗಳ ನಡುವೆ ಕಡಿಮೆ ಬಲಿತ ಕಡ್ಡಿಗಳನ್ನು ಅರಿಸಬೇಕು. ಎರಡು ಗಣ್ಣುಗಳನ್ನು ಮಣ್ಣಿನಲ್ಲಿ ಇರುವಂತೆ ಪಾತಿಗಳಲ್ಲಿ ನಾಟಿ ಮಾಡಬೇಕು.

ಚೆನ್ನಾಗಿ ಬೇರು ಬಿಡಲು ಥಾಮ್ಸನ್ ಸೀಡ್‌ ಲೆಸ್ ತಳಿಯ ಕಡ್ಡಿಯ ಕೆಳಭಾಗವನ್ನು 24 ರಿಂದ 48 ತಾಸುಗಳ ಕಾಲ ಅಥವಾ 12 ತಾಸುಗಳ ಕಾಲ 250 ಪಿ.ಪಿ.ಎಮ್ ಇಂಡೋಲ್ ಬ್ಯುಟೆರಿಕ್ ಆಮ್ಲ (250 ಮಿ .ಗ್ರಾಂ 1ಲೀ. ನೀರಿನಲ್ಲಿ) ದ್ರಾವಣದಲ್ಲಿ ನೆನೆಹಾಕಿ ನಾಟಿಗೆ ಉಪಯೋಗಿಸಬೇಕು.

 

› ಕಣ್ಣು ಕಸಿ ವಿಧಾನ :

ಇತ್ತೀಚಿನ ದಿನಗಳಲ್ಲಿ ಬೀಜರಹಿತ ತಳಿಗಳನ್ನು ತೋಟದಲ್ಲೇ ಕಣ್ಣು ಕಸಿ ವಿಧಾನ ಅನುಸರಿಸಿ ಗಿಡಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಡಾಗ್ ರಿಡ್ಜ್ (dogridge) ಬೇರು ಸಸಿಗಳನ್ನು ತೋಟದ ಗುಂಡಿಗಳಲ್ಲಿ ನಾಟಿ ಮಾಡಬೇಕು. ಒಂದು ವರ್ಷದ ನಂತರ, (ಅಕ್ಟೋಬರ್ – ಜನವರಿ) ಬೆಳೆದ ಬೇರು ಕಾಂಡಗಳ ಮೇಲೆ (ಭೂಮಿಯಿಂದ 1 ಅಡಿ ಎತ್ತರದಲ್ಲಿ) ಆಯ್ಕೆ ತಳಿಗಳ ಕಣ್ಣುಗಳನ್ನು (Bud) ತಂದು ಕಣ್ಣು ಕಸಿ ಮಾಡಬೇಕು. ಮತ್ತು ಚಿಗುರಿದ ಕಣ್ಣು ಕಸಿಯನ್ನು ಚಪ್ಪರದ ಎತ್ತರಕ್ಕೆ ಬೆಳೆಸಿಕೊಳ್ಳಬೇಕು .

 

› ನಾಟಿ ಮಾಡುವುದು :

ಉತ್ತಮವಾಗಿ ಬೇರುಬಿಟ್ಟ ಮೂರು ಕಣ್ಣುಳ್ಳ ಕಡ್ಡಿಗಳನ್ನು ನಾಟಿಮಾಡಬೇಕು. ಅಕ್ಟೋಬರ್ ತಿಂಗಳ ಎರಡನೇ ವಾರದಿಂದ ಜನವರಿ ತಿಂಗಳ ಕೊನೆಯವರೆಗೆ ನಾಟಿಗೆ ಸೂಕ್ತ. ಅಕ್ಟೋಬರ್ ತಿಂಗಳಲ್ಲಿ ನಿರ್ದಿಷ್ಟ ಪಡಿಸಿದ ಅಂತರದಲ್ಲಿ 19,20,21 ಸೆಂ.ಮೀ. ಅಳತೆಯ ಗುಣಿಗಳನ್ನು 15 ದಿವಸ ಮುಂಚಿತವಾಗಿ ತಯಾರಿಸಬೇಕು.

ಕಡಿಮೆ ಅಂತರದಲ್ಲಿ ನಾಟಿ ಮಾಡುವ ಪಕ್ಷದಲ್ಲಿ ಸಾಲಿನುದ್ದಕ್ಕೂ ಹರಿ ಕಾಲುವೆಗಳನ್ನು 10 ಸೆಂ.ಮೀ. ಆಳ ಮತ್ತು 10 ಸೆಂ.ಮೀ. ಆಗಲ ತೆಗೆಯುವುದು ಒಳ್ಳೆಯದು. ಗುಣಿಗಳನ್ನು ಒಂದು ಪದರ ಹಸಿರೆಲೆ (ಹೊಂಗೆ ಸೊಪ್ಪು ಅಥವಾ ಗ್ಲಿರಿಸೀಡಿಯ ಎಲೆಗಳು) ಹಾಕಿ ಮೇಲುಭಾಗದಲ್ಲಿ ಒಂದು ಪದರು ಮೇಲ್ಮಣ್ಣು ಹಾಕಿ ಮುಚ್ಚಬೇಕು.

ಇದೇ ಸಮಯದಲ್ಲಿ ಪ್ರತಿ ಗುಣಿಗೆ/ಪ್ರತಿ ನಾಟಿ ಸ್ಥಳಕ್ಕೆ 400 ಗ್ರಾಂ ಬೋನ್‌ಮೀಲ್ ಅಥವಾ 40 ಸೂಪರ್ ಫಾಸ್ಪೇಟ್ ಮತ್ತು 1 ಕಿ.ಗ್ರಾಂ ಬೇವಿನ ಹಿಂಡಿಯನ್ನು ಹಾಕಬೇಕು. ನಂತರ ತೆಳುವಾಗಿ ನೀರು ಹಾಯಿಸಿ ಮಣ್ಣು ಚೆನ್ನಾಗಿ ಕುಳಿತುಕೊಳ್ಳುವಂತೆ ಮಾಡಬೇಕು. ಒಂದು ವಾರದ ನಂತರ ಬೇರು ಬಂದ ಕಡ್ಡಿಗಳನ್ನು ನಾಟಿ ಮಾಡಬೇಕು.

› ಬಳ್ಳಿ ಹಬ್ಬಿಸುವುದು :

ದ್ರಾಕ್ಷಿ ಬಳ್ಳಿಗಳು ಚಪ್ಪರ (ಪೆಂಡಾಲ್) ವಿಧಾನದಲ್ಲಿ ಹಬ್ಬಿಸಿದಲ್ಲಿ ಉಳಿದ ವಿಧಾನಗಳಿಗಿಂತ (ಟೆಲಿಫೋನ್, ನಿಫಿನ್, ಕಾರ್ಡಾನ್ ಮತ್ತು ಹೆಡ್) ಹೆಚ್ಚಿನ ಇಳುವರಿ ಕೊಡುತ್ತವೆ. ಹೀಗಾಗಿ ಹೆಚ್ಚಾಗಿ ಚಪ್ಪರ ವಿಧಾನದಿಂದ ದ್ರಾಕ್ಷಿಯನ್ನು ಬೆಳೆಯುವುದು ರೂಢಿ.

 

› ಬಳ್ಳಿ ಕತ್ತರಿಸುವುದು (ಚಾಟನಿ ಮಾಡುವುದು):

ಸಾಮಾನ್ಯವಾಗಿ ನಾಟಿ ಮಾಡಿದ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಬಳ್ಳಿಗಳ ಗಾತ್ರ ಮುಂಗೈ ದಪ್ಪಗಿಂತ ಸ್ವಲ್ಪ ಕಡಿಮೆ ಇದ್ದಾಗ ಹಣ್ಣು ಪಡೆಯಲು ಬಳ್ಳಿಗಳನ್ನು ಚಾಟನಿ ಮಾಡುತ್ತಾರೆ.

ಇದನ್ನು ಉತ್ತಮ ಇಳುವರಿ ಮತ್ತು ಬಳ್ಳಿಗಳ ಬೆಳವಣಿಗೆಯನ್ನು ನಿಯಂತ್ರಿಸಲು ಕೈಗೊಳ್ಳುತ್ತಾರೆ. ಬಳ್ಳಿಯನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಒಮ್ಮೆ ಏಪ್ರಿಲ್ (ಬೇಸಿಗೆ) ತಿಂಗಳಲ್ಲಿ ಮತ್ತು ಇನ್ನೊಮ್ಮೆ ಆಕ್ಟೋಬರ್‌ (ಚಳಿಗಾಲ) ತಿಂಗಳಲ್ಲಿ ಕತ್ತರಿಸುತ್ತಾರೆ.

 

ಬೇಸಿಗೆ ಚಾಟನಿ (ಬಳ್ಳಿ ಕತ್ತರಿಸುವುದು):

ಸಾಮಾನ್ಯವಾಗಿ ಬಳ್ಳಿಯ ಮುಖ್ಯ ರೆಂಬೆಗಳು ಹಾಗೂ ಸಣ್ಣ ರೆಂಬೆಗಳ ಮೇಲೆ ಒಂದು ವರ್ಷ ಹಳೆಯ ಮತ್ತು ಹೊಸದಾಗಿ ಬೆಳೆದ ಕಡ್ಡಿಗಳನ್ನು ಒಂದು ಕಣ್ಣು ಬಿಟ್ಟು ಕತ್ತರಿಸಬೇಕು. ನಂತರ ಬಳ್ಳಿಯ ಮೇಲೆ ಉಳಿದ ಎಲ್ಲಾ ಎಲೆಗಳನ್ನು ತೆಗೆದುಹಾಕಿ, ಇದನ್ನು ‘ಹಿಂಚಾಟನಿ’ ಅಥವಾ ‘ತಳಪಾಯ ಚಾಟನಿ’ ಎಂದು ಕರೆಯುತ್ತಾರೆ.

 

ಚಳಿಗಾಲ ಚಾಟನಿ:

ಇದನ್ನು ಆಕ್ಟೋಬರ್ ತಿಂಗಳಲ್ಲಿ ಕೈಗೊಳ್ಳುತ್ತಾರೆ. ಬಳ್ಳಿ ಕತ್ತರಿಸುವುದಕ್ಕೆ ಮೂರು ವಾರ ಮುಂಚೆ ನೀರು ಹಾಯಿಸುವುದು ನಿಲ್ಲಿಸಿ, ಬಳ್ಳಿಗಳಿಗೆ ವಿಶ್ರಾಂತಿ ಕೊಡಬೇಕು. ಬಳ್ಳಿಗಳ ಬುಡದ ಸುತ್ತಲೂ 10-15 ಸೆಂ.ಮೀ. ಆಳದ ಪಾತಿ ಮಾಡಬೇಕು.

ಚೆನ್ನಾಗಿ ಬಲಿತ ಕಂದು ಬಣ್ಣದ ಪೆನ್ಸಿಲ್ ಗಾತದ ಕಡ್ಡಿಗಳಲ್ಲಿ ಅನಾಬ್ -ಇ – ಶಾಹಿ ತಳಿಯಾದಲ್ಲಿ 5-7 ಕಣ್ಣು ಬಿಟ್ಟು, ಥಾಮ್ಸನ್ ಸೀಡ್ಲೆಸ್ ತಳಿಯಾದಲ್ಲಿ 8-10 ಕಣ್ಣು ಬಿಟ್ಟು ಮೇಲ್ಬಾಗವನ್ನು ಚಾಟನಿ ಮಾಡಬೇಕು. ಅರ್ಕಾವತಿ ಮುಂತಾದ ಸಂಕರಣ ತಳಿಗಳಲ್ಲಿ 5-6 ಕಣ್ಣು ಬಿಟ್ಟು ಚಾಟನಿ ಮಾಡುತ್ತಾರೆ.

 

ಕಣ್ಣುಗಳಲ್ಲಿ ಹಣ್ಣು ಬಿಡುವ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ವಾತಾವರಣ, ಪೋಷಣೆ, ಹಿಂದಿನ ವರ್ಷದ ಬೆಳೆಯ ಹೊರೆ, ಮುಂತಾದವುಗಳನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ. ಆದ್ದರಿಂದ ರೈತರು ತೋಟಗಾರಿಕೆ ತಜ್ಞರನ್ನು ಸಂಪರ್ಕಿಸಿ ಕಡ್ಡಿಗಳ ಹಣ್ಣು ಕೊಡುವ ಶಕ್ತಿಗನುಗುಣವಾಗಿ ಚಾಟನಿ ಮಾಡಬೇಕಾದ, ಪ್ರಮಾಣದ ಬಗ್ಗೆ ಮಾರ್ಗದರ್ಶನ ಪಡೆಯಲು ಸೂಚಿಸಲಾಗಿದೆ.

 

› ಡಾರ್ಮ್ಯಾ್ರ ಬಳಕೆ :

ಶೇಕಡ 2 ರ ಹೈಡೋಜನ್ ಸೈನಾಮೈಡ್ ರಾಸಾಯನಿಕ ದ್ರಾವಣದಲ್ಲಿ ಅರಳಿ (ಹತ್ತಿಯನ್ನು) ಅದ್ದಿ ಆಕ್ಟೋಬರ್ ಚಾಟನಿಯಾದ ನಂತರ ಅರನೇ ಹಾಗೂ ನಂತರದ ಕಣ್ಣುಗಳಿಗೆ ಲೇಪಿಸುವುದರಿಂದ ಬೀಜರಹಿತ ದ್ರಾಕ್ಷಿ ಬೆಳೆಯಲ್ಲಿ ಕಣ್ಣು ಚಿಗುರುವಿಕೆಯ ಪ್ರಮಾಣ ಹೆಚ್ಚಿಸಬಹುದು. ದ್ರಾವಣವನ್ನು ಲೇಪನ ಮಾಡುವಾಗ ಕೈಗಳಿಗೆ ರಬ್ಬರ ಕವಚ ಹಾಕಿಕೊಳ್ಳಬೇಕು.

 

› ಗೊಬ್ಬರ ಹಾಕುವುದು:

ಸಾರಜನಕ ಮತ್ತು ರಂಜಕ ಉತ್ತಮ ಬೆಳವಣಿಗೆಗೆ ಹಾಗೂ ಹಣ್ಣು ಬಿಡಲು ಸಹಾಯವಾಗುತ್ತವೆ. ಪೊಟ್ಯಾಷ್ ಅಂಶವು ಹಣ್ಣುಗಳ ಬಣ್ಣ ಮತ್ತು ಗುಣಮಟ್ಟ ಸುಧಾರಣೆಗೆ ಬೇಕು.

# ಗೊಂಚಲಿನ ಗಾತ್ರ ಮತ್ತು ಹಣ್ಣುಗಳ ಗುಣಮಟ್ಟ ಹೆಚ್ಚಿಸುವುದು:

ಥಾಮ್ಸನ್‌ ಸೀಡಲೆಸ್‌ ತಳಿಯಲ್ಲಿ ಕಚ್ಚುವ ಹಂತದಲ್ಲಿ 50 ಪಿ.ಪಿ.ಎಂ. ಜಿಬ್ಬರ್ಲಿಕ್ (Gibberlic acid) ಆಮ್ಲದ ದ್ರಾವಣದಲ್ಲಿ ಅದ್ದುವುದರಿಂದ ಗೊಂಚಲಿನಲ್ಲಿ ಹಣ್ಣು ಒತ್ತಾಗಿರುವುದು ಕಡಿಮೆಯಾಗುವುದಲ್ಲದೇ ಗೊಂಚಲು ಹಾಗೂ ಹಣ್ಣುಗಳ ಗಾತ್ರ ದ್ವಿಗುಣಗೊಳ್ಳುವುದು.

 

# ಕಳೆ ನಿರ್ವಹಣೆ :

ಸಾಲುಗಳ ಮಧ್ಯೆ ಅಂತರಬೇಸಾಯ ಮಾಡಿ ಕೈಯಿಂದ ಕಳೆ ತೆಗೆಯಬಹುದು. ಇಲ್ಲವೆ ಕಳೆನಾಶಕಗಳನ್ನು ಬಳಸಬಹುದು.

 

# ರೋಗಗಳು:

1) ಬೂಜುತುಪ್ಪಟ ರೋಗ ಮತ್ತು ಚಿಬ್ಬುರೋಗ ( ಅಂತರಾಕೆನೋಸ್) :

ಹತೋಟಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್, 1 ಗ್ರಾಂ ಕಾರ್ಬೆನ್‌ಡೈಜಿಮ್ 50 ಡಬ್ಲ್ಯೂ.ಪಿ. ಅಥವಾ 1 ಮಿ.ಲೀ. ಡೈಫಿನ್‌ಕೋನೋಜೋಲ್ ಅಥವಾ 2 ಗ್ರಾಂ. ಮೆಟಾಲಾಕ್ಸಿಲ್ ಎಂ.ಝಡ್. ಪ್ರತಿ ಲೀಟರ್ ನೀರಿನಲ್ಲಿ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯೂ.ಪಿ=(COC). ಅಥವಾ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲ್ಯೂ.ಪಿ.(Mancozeb) ಕರಗಿಸಿ ಸಿಂಪಡಿಸಬೇಕು.

ಶಿಲೀಂದ್ರ ನಾಶಕಗಳ ಬದಲಾಗಿ ಶೇ.1 ರ ಬೋರ್ಡೊ(Bordo)ಕೂಡಾ ರೋಗಗಳ ಹತೋಟಿಗೆ ಶಿಫಾರಸ್ಸು ಮಾಡಲಾಗಿದೆ. ಇದು ಬೂಜು ತುಪ್ಪಟ ಹಾಗೂ ಚಿಟ್ಟು ರೋಗ (ಆಂತ್ರಕ್ಕನೋಸ್) ಗಳನ್ನು ನಿಯಂತ್ರಿಸುತ್ತದೆ.

ಬೂಜು ತುಪ್ಪಟ ರೋಗದ ಹತೋಟಿಗಾಗಿ ಮೆಟಲಕ್ಸಿಲ್ ಎಂ.ಝಡ್. 72 ಡಬ್ಲ್ಯೂ.ಪಿ (Metalaxyl) ಅಥವಾ ಅಜಾಕ್ಸಿಸ್ಟ್ರೋಬಿನ್‌ (ಅಮಿಸ್ಟಾರ್) ಅಥವಾ 2 ಗ್ರಾಂ ಅನಾಮಿಡಾನ್ + ಮ್ಯಾಂಕೋಜೆಬ್ ಒಂದು ಲೀಟರ್ ನೀರಿಗೆ ಬೆರೆಸಿ ಪ್ರತಿ 10-15 ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು.

 

2) ಬಳ್ಳಿ ಒಣಗುವಿಕೆ:

ಬಳ್ಳಿಯ ಒಣಗಿದ ಭಾಗದಿಂದ ಒಂದು ಅಡಿ ತಳಭಾಗಕ್ಕೆ ಕತ್ತರಿಸಿ ತೆಗೆದು ನೀರಿನಲ್ಲಿ ಮಿಶ್ರ ಮಾಡಿ ಲೇಪಿಸುವುದು. 2 ರಿಂದ 3 ವರ್ಷದ ಬೆಳೆಗೆ 1 ಗ್ರಾಂ ಕಾರ್ಬೆಂಡೈಝಯಂ ಒಂದು ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಕಾಂಡದ ಸುತ್ತ ಮಣ್ಣಿನಲ್ಲಿ ಸುರಿಯಬೇಕು.

 

3) ಬೂದಿ ರೋಗ :

ಹತೋಟಿಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀಟರ್ ನೀರಿಗೆ ಬೆರೆಸಿ ಪ್ರತಿ 10-15 ದಿನಗಳಿಗೊಮ್ಮೆ ಸಿಂಪರಣೆ ಮಾಡಬೇಕು. ಅಥವಾ 2 ಮಿ.ಲೀ. ಕಾರ್ಬಾಕ್ಸಿನ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಸಿಂಪರಿಸಬೇಕು.

 

4) ದುಂಡಾಣು ಎಲೆ ಚುಕ್ಕೆ ರೋಗ:

ಹತೋಟಿಗೆ ಸೈನ್ ಅಥವಾ ಸೈಕ್ಲೋಸೈನ್ ಅಥವಾ ಪೌರೋಮೈಸಿನ್ 0.30 ಗ್ರಾಂ ಹಾಗೂ ತಾಮ್ರದ ಆಕ್ಸಿಕೋರೈಡ್ (COC) ಪ್ರತಿ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಸಿಂಪರಿಸಿ, ನಂತರ 15 ದಿನಗಳಲ್ಲಿ ಕನಿಷ್ಠ 3 ಸಿಂಪರಣೆಯನ್ನು ಕೊಡುವುದು.

ಬಹುತೇಕ ಎಲ್ಲಾ ತಳಿಗಳು ಹಣ್ಣಾದಾಗ ಆಕರ್ಷಕ ಬಂಗಾರದ ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ. ಕಪ್ಪು ಬಣ್ಣದ ತಳಿಗಳು ಸಮನಾದ ದಟ್ಟ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇಳುವರಿ ಪ್ರಮಾಣವು ತಳಿ, ಒಳ್ಳೆಯ ವಯಸ್ಸು ಮತ್ತು ಬೇಸಾಯ ಕ್ರಮಗಳನ್ನು ಅವಲಂಬಿಸಿದೆ. ಪ್ರತಿ ಹೆಕ್ಟೇರಿಗೆ 15-18 ಟನ್ ಇಳುವರಿ ಪಡೆಯಬಹುದು.

 

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಾಹಿನಿ 🌱ವೆಬ್ಸೈಟ್ನ

ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *