ನಮಸ್ಕಾರ ಪ್ರೀಯ ರೈತ ಭಾಂಧವರೇ, ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕಬ್ಬಿನ ಉತ್ಪಾದನೆಯಲ್ಲಿ ಬ್ರೆಜಿಲ್ ದೇಶವು ಮೊದಲನೇ ಸ್ಥಾನ ಹೊಂದಿದ್ದು, ಭಾರತವು ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಒಟ್ಟು 4 ಮಿಲಿಯನ್ ಹೇಕ್ಟರ್ ಕ್ಷೇತ್ರದಲ್ಲಿ ಅಥವಾ ಪ್ರದೇಶದಲ್ಲಿ ಈ ಬೆಳೆಯು ಆವರಿಸಿದ್ದು, ಅಂದಾಜು ಸುಮಾರು 325 ಮಿಲಿಯನ್ ಟನ್ ಉತ್ಪಾದನೆಯನ್ನು ಹೊಂದಿದೆ. ಇದರ ಉತ್ಪಾದಕತೆಯನ್ನು ನೋಡುವುದಾದರೆ ಸರಾಸರಿ ಒಂದು ಹೆಕ್ಟೇರ್‌ಗೆ ಅಂದಾಜು 70 ಟನ್ ಆಗಿರುತ್ತದೆ. ಇದನ್ನು ಹೆಚ್ಚಾಗಿ ನೀರು ಬಸಿದು ಹೋಗುವಂತಹ ಕಪ್ಪು ಮಿಶ್ರಿತ ಮಣ್ಣಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಭಾರತವು ವಿವಿಧ ಕೃಷಿ ವಲಯಗಳಿಂದ ಕೂಡಿದ್ದು, ಒಣ ಪ್ರದೇಶ ಮತ್ತು ಆರೆ ಒಣ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣ ಪ್ರದೇಶಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಮತ್ತು ಕೇರಳ ಹಾಗೂ ಅರೆ ಒಣ ಪ್ರದೇಶಗಳಾದ ಉತ್ತರಪ್ರದೇಶ, ಹರಿಯಾಣ, ಬಿಹಾರ ಮತ್ತು ನೈರುತ್ಯ ಭಾಗದಲ್ಲಿ ಹೆಚ್ಚಾಗಿ ಈ ಬೆಲೆಯನ್ನು ಬೆಳೆಯುತ್ತಾರೆ.

ಉತ್ತರ ಕರ್ನಾಟಕದಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದ್ದು, ಇದನ್ನು ಹೆಚ್ಚಾಗಿ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ದೇಶದಲ್ಲಿ ಪ್ರತಿ ವರ್ಷವು ಸರಾಸರಿ 65 ಮಿಲಿಯನ್ ಟನ್ ಕಬ್ಬಿನ ರವದಿಯನ್ನು ಉತ್ಪಾದಿಸಲಾಗುತ್ತಿದ್ದು, ಅದನ್ನು ಹೊಲದಲ್ಲಿಯೇ ಸುಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಗೊಬ್ಬರ ತಯಾರಿಕೆಯ ತಂತ್ರಜ್ಞಾನದ ಕೊರತೆ.

ಕಬ್ಬಿನ ರವದಿಯು ಹೊಲದಲ್ಲಿಯೇ ಇಂಗಾಲ ವಾತಾವರಣಕ್ಕೆ ಸೇರಿಸುತ್ತದೆ. ಹೊಲಗಳಲ್ಲಿ ಕಬ್ಬಿನ ರವದಿಯನ್ನು ಸುಡುವುದರಿಂದ ವೈವಿಧ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೊಲದಲ್ಲಿ ಮಣ್ಣಿನ ಫಲವತ್ತತೆ, ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹಾಗೂ ಪೋಷಕಾಂಶಗಳು ಕಡಿಮೆಯಾಗುತ್ತವೆ. ಈ ಮೇಲಿನ ಅಡ್ಡ ಮತ್ತು ಕೆಟ್ಟ ಪರಿಣಾಮವನ್ನು ತಡೆಗಟ್ಟಲು ಸ್ಥಾನಿಕ ಎರೆ ಕೃಷಿಯು ಪ್ರಮುಖ ಪಾತ್ರವಹಿಸುತ್ತದೆ.

 

ಇಂದು ನಾವು ಕಬ್ಬಿನ ಬೆಳೆಯಲ್ಲಿ ಸ್ಥಾನಿಕ ಎರೆ ಕೃಷಿಯನ್ನು ಮಾಡುವುದು ಹೇಗೆ? ಮತ್ತು ಈ ಕ್ರಿಯೆಯ ಬಗ್ಗೆ ಇರುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದು ನಾವು ತಿಳಿದುಕೊಳ್ಳೋಣ.

ಕೃಷಿಯು ಸಮೃದ್ಧಿ ಭಾರತದಲ್ಲಿ ಅದೊಂದು ಸುಧೀರ್ಘ ಪರಂಪರೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಅಧಿಕ ಇಳುವರಿ ನೀಡುವ ತಳಿಗಳನ್ನು ಅಳವಡಿಸಿದಾಗ ಹೆಚ್ಚಿನ ಇಳುವರಿಯನ್ನು ಪಡೆಯುವುದು ಸಾಧ್ಯ. ಇದರ ಪರಿಣಾಮವಾಗಿ “ಹಸಿರು ಕ್ರಾಂತಿ” ನಿರೂಪಗೊಂಡಿತು. ಸಂಕರಣ ತಳಿಗಳ ಜೊತೆಯಲ್ಲಿಯೇ ರಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಹಾಗೂ ಇತ್ಯಾದಿಗಳ ಬಳಕೆಯೂ ಹೆಚ್ಚುತ್ತಾ ಹೋಗಿದೆ. ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ, ಸೂಕ್ಷ್ಮಾಣು ಜೀವಿಗಳು ಮತ್ತು ಪೋಷಕಾಂಶಗಳು ಕಡಿಮೆಯಾಗುತ್ತದೆ. ಇದರಿಂದ ನಿಗದಿ ಪಡಿಸಿದ ಇಳುವರಿಗಿಂತ ಕಡಿಮೆ ಇಳುವರಿ ಬರುತ್ತದೆ.

ಕಾಲ ಗತಿಸಿದಂತೆ ಬದಲಾವಣೆ ಅನಿವಾರ್ಯವೆಂಬಂತೆ ಮತ್ತೆ ನೀರಾವರಿ ಕೃಷಿ ಪರಂಪರತೆಯಿಂದ ಮಣ್ಣಿನ ಹಾಗೂ ಪರಿಸರದ ಉಳಿವಿಗಾಗಿ, ಹಸನಾದ ಮಾನವನ ಬದುಕಿಗಾಗಿ ಅನಿವಾರ್ಯವಾಗುತ್ತಿದೆ. ಸಹಜ ಸಾರದ ಸಮೃದ್ಧ ಭೂಮಿಗೆ ಸಾವಯವ ಕೃಷಿ ಪೂರಕ. ಮಣ್ಣಿನ ಫಲವತ್ತತೆ ಮತ್ತು ಬೆಳೆಗಳ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಂಡು, ಪರಿಸರದ ರಕ್ಷಣೆ ಮಾಡುವುದು ಸಾವಯವ ಕೃಷಿಯ ವೈಶಿಷ್ಟ.

 

• ಕೃಷಿಯಲ್ಲಿ ರಾಸಾಯನಿಕಗಳಂದಾಗುವ ಅನಾಹುತಗಳು:

» ರಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವುದರಿಂದ ಭೂಮಿಯ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತದೆ.

» ಕೀಟ ಹಾಗೂ ರೋಗಗಳನ್ನು ಪ್ರತಿರೋಧಿಸುವ ಶಕ್ತಿಯನ್ನು ಬೆಳೆಗಳು ಕಳೆದುಕೊಳ್ಳುತ್ತದೆ.

» ಬೆಳೆ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಅಲ್ಲದೆ ಗುಣಮಟ್ಟದಲ್ಲಿ ಇಳಿಕೆ ಕಂಡು ಬರುತ್ತದೆ.

» ರಸಾಯನಿಕಗಳ ಬಳಕೆಯಿಂದ ಭೂಸವೆತ ಹೆಚ್ಚಾಗುತ್ತದೆ. ಆಮ್ಲಿಯ ಹಾಗೂ ಅದರ ಘಟಕಗಳು ಮಣ್ಣಿನೊಂದಿಗೆ ಪ್ರತಿಕ್ರಿಯಿಸಿ ಮಣ್ಣಿನ ರಸ ಸಾರದಲ್ಲಿ ಮತ್ತು ವಿದ್ಯುತ್‌ ಸಂವಹನ ಹೆಚ್ಚು ಕಡಿಮೆಯಾಗಲು ಕಾರಣಿಭೂತವಾಗಿದೆ.

ಈ ಮೇಲಿನ ಎಲ್ಲಾ ತಪ್ಪಿಸಲು ಕೃಷಿ ವಿಶ್ವವಿದ್ಯಾಲಯವು ಸ್ಥಾನಿಕ ಎರೆ ಕೃಷಿ ಎಂಬ ತಂತ್ರಜ್ಞಾನವನ್ನು ರೈತರಿಗೆ ತಿಳಿಸಿಕೊಡುವುದರಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸ್ಥಾನಿಕ ಎರೆ ಕೃಷಿ ಮಾಡಲು ಕಬ್ಬಿನ ರವದಿಯು ಪ್ರಮುಖ ಕೃಷಿ ತ್ಯಾಜ್ಯ ವಸ್ತುವಾಗಿದೆ.

 

ಎರೇಹುಳು ಕೃಷಿಯ ಮಹತ್ವ

 

* “ಸಾವಯವ ಕೃಷಿ”ಎಂದಾಕ್ಷಣ ಮೊದಲು ಗಮನಕ್ಕೆ ಬರುವುದು ಎರೆಹುಳು ಕೃಷಿ. ನಿಸರ್ಗದ ನೇಗಿಲು, ರೈತನ ಮಿತ್ರ, ಭೂಮಿಯ ಕರುಳು ಎಂದು ಕರೆಯಲ್ಪಡುವ ಎರೆಹುಳು ನಿಸರ್ಗದಲ್ಲಿ ಮಣ್ಣನ್ನು ನಿರಂತರವಾಗಿ ಉಳುತ್ತಿರುತ್ತದೆ.

* ಸಾವಯವ ವಸ್ತುಗಳಾದ ಕೊಳೆತ ಎಲೆ, ಕಸಕಡ್ಡಿ ಮುಂತಾದವುಗಳನ್ನು ತಿನ್ನುತ್ತಾ ಮಣ್ಣನ್ನು ಮೇಲೆ ತಂದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ.

* ಇದರ ಚಟುವಟಿಕೆಯಿಂದಾಗಿ ಭೂಮಿಯ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಶೇಕಡಾ 10 ಪಟ್ಟು ಹೆಚ್ಚಾಗುವುದಲ್ಲದೇ ಬೆಳೆಗೆ ಅತ್ಯವಶ್ಯಕವಾಗಿ ಬೇಕಾಗುವ ಪೋಷಕಾಂಶಗಳು ಕರಗಿ ಅಂತರ್ಜಲಕ್ಕೆ ಸೇರಿ, ಸೋರಿ ಹೋಗದಂತೆ ತಡೆಯುತ್ತದೆ.

* ಹಾಗೂ ಅದೇ ರೀತಿಯಾಗಿ ಎರೆಹುಳು ಗೊಬ್ಬರ ಬಳಸಿದ ಬೆಳೆಗೆ ಕೀಟ ರೋಗದ ಬಾಧೆ ಕಡಿಮೆ. ಎಲ್ಲವುಗಳಿಗಿಂತ ಮಿಗಿಲಾಗಿ ಫಸಲಿನ ಆರೋಗ್ಯ ಹೆಚ್ಚಿ, ಉತ್ತಮವಾದ ನೀರು, ಗಾಳಿ ಮತ್ತು ಆಹಾರಾದಿಗಳಲ್ಲಿ ವಿಷ ಬೆರಿಕೆ ಕಡಿಮೆಯಾಗುತ್ತದೆ.

* ಇದು ಎಲ್ಲಾ ಪ್ರಕಾರದ ಜಮೀನು, ಬೆಳೆ ಮತ್ತು ಋತುವಿಗೆ ಯೋಗ್ಯವಾಗಿರುತ್ತದೆ. ಇವೆಲ್ಲವುಗಳ ಜೊತೆಯಲ್ಲಿ ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

 

* ಎರೆ ಹುಳುಗಳ ಚಟುವಟಿಕೆಯಿಂದಾಗಿ,

• ಪ್ರತಿ ಕ್ವಿಂಟಲ್ ಎರೆಗೊಬ್ಬರ ಸುಮಾರು 800 ಗ್ರಾಂ ಸಾರಜನಕ, 1,100 ಗ್ರಾಂ ರಂಜಕ ಮತ್ತು 500 ಗ್ರಾಂ ಪೊಟ್ಯಾಶನ್ನು ಹೊಂದಿರುವದಾಗಿ ಸಂಶೋಧನೆಯಿಂದ ತಿಳಿದು ಬಂದಿದೆ.

• ಎರೆ ಗೊಬ್ಬರವನ್ನು ಸಗಣಿ ಗೊಬ್ಬರಕ್ಕೆ ಹೋಲಿಸಿದರೆ, ಎರೆಗೊಬ್ಬರ ಸಗಣಿ ಗೊಬ್ಬರಕ್ಕಿಂತ ಎರಡು ಪಟ್ಟು ಹೆಚ್ಚು ಸಾರಜನಕ ಹಾಗೂ ಐದು ಪಟ್ಟು ಹೆಚ್ಚು ರಂಜಕ ಹಾಗೂ ಐದು ಪಟ್ಟು ಹೆಚ್ಚು ಪೊಟ್ಯಾಶ್ ಹೊಂದಿರುತ್ತದೆ.

• ಎರೆ ಗೊಬ್ಬರವನ್ನು ರಾಸಾಯನಿಕ ಗೊಬ್ಬರದೊಡನೆ ಹೋಲಿಸಿದಾಗ ಒಂದು ಕ್ವಿಂಟಲ್ ಎರೆ ಗೊಬ್ಬರ ಕೊಟ್ಟರೆ ಸುಮಾರು ಎರಡು ಕಿ.ಗ್ರಾಂ ಯೂರಿಯಾ, ಏಳು ಕಿ.ಗ್ರಾಂ ರಂಜಕ, ಒಂದು ಕಿಗ್ರಾಂ ಪೊಟ್ಯಾಶ್ ಕೊಟ್ಟಂತೆ.

• ಎರೆಗೊಬ್ಬರವು ಮೆಗ್ನೇಷಿಯಂ, ಕಬ್ಬಿಣ, ಬೋರಾನ್, ಮೊಲಿಬ್ದಿನಮ್. ಸತುವು ಮತ್ತು ಹಲವು ಬೆಳೆ ವರ್ಧಕಗಳನ್ನೂ, ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವುದಾಗಿ ತಿಳಿದು ಬಂದಿದೆ.

• ಸತತವಾಗಿ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚುವುದು.

• ಮಣ್ಣಿನಲ್ಲಿ ಗಾಳಿಯಾಡುವಿಕೆ ಹೆಚ್ಚುತ್ತದೆ.

• ಎರೆಗೊಬ್ಬರ ಬಳಸಿದ ಭೂಮಿಯಲ್ಲಿ ಲವಣಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದು. ಹಾಗೂ ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳು ಬೇಗನೆ ಲಭ್ಯವಾಗುವವು. 8

• ಮಣ್ಣಿನ ಸವೆತ ತಡೆಗಟ್ಟಬಹುದು

ರಾಸಾಯನಿಕ ಕೃಷಿಯಿಂದಾಗುವ ದುಷ್ಪರಿಣಾಮಗಳು ಹಾಗೂ ಅದರ ವೈಫಲ್ಯದ ಹಿನ್ನಲೆಯಲ್ಲಿ ಸಾಮಾನ್ಯ ರೈತ ಸಹಜ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ದಿಶೆಯಲ್ಲಿ ಭೂಮಿಯ ಫಲವತ್ತತೆ ಹಾಗೂ ತ್ಯಾಜ್ಯ ಪದಾರ್ಥಗಳ ನಿರ್ವಹಣೆಗೆ ಎರೆಹುಳು ಕೃಷಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಶ್ರೇಷ್ಠ ಗುಣಮಟ್ಟವನ್ನು ಹೊಂದಿರುವ ಎರೆಹುಳು ಗೊಬ್ಬರವನ್ನು ಬಳಸುವುದರ ಮೂಲಕ ರಾಸಾಯನಿಕ ಗೊಬ್ಬರಗಳಿಗೆ ವಿದಾಯ ಹೇಳಿ ಬೇಸಾಯದ ಖರ್ಚನ್ನು ತಗ್ಗಿಸುವ ನೈತಿಕತೆಯನ್ನು ಎಲ್ಲಾ ಭಾಗದ ರೈತರು ಅಳವಡಿಸಿಕೊಳ್ಳುವುದು ಶ್ಲಾಘನೀಯ.(ಅನಿವಾರ್ಯ )

 

# ಎರೆಗೊಬ್ಬರ ವೈಶಿಷ್ಟ್ಯಗಳು:

       ಎರೆಗೋಬ್ಬರದಲ್ಲಿರುವ ಪೋಷಕಾಂಶಗಳು,

 

* ಸಾವಯವ ಇಂಗಾಲ

* ಸಾರಜನಕ

* ರಂಜಕ

* ಪೊಟ್ಯಾಷ್

* ಸೋಡಿಯಂ

* ಕ್ಯಾಲ್ಸಿಯಂ

* ಮೆಗ್ನೀಷಿಯಂ

* ತಾಮ್ರ

* ಕಬ್ಬಿಣ

* ಸತು

* ಗಂಧಕ

 

• ಕಬ್ಬಿನಲ್ಲಿ ಸ್ಥಾನಿಕ ಎರೆಹುಳು ಕೃಷಿ:

ಬೆಳೆಯ ಬುಡದಲ್ಲಿ(ಮಡಿಯಲ್ಲಿ) ಎರೆಹುಳುಗಳನ್ನು ಬಿಟ್ಟು ಬೆಳೆಗಳಿಗೆ ಪೋಷಕಾಂಶ ಒದಗಿಸುವ ವಿಧಾನವೇ ಸ್ತಾನಿಕ ಎರೆಕೃಷಿ. ಹೊಲಗಳ ಅಥವಾ ತೋಟಗಳ ಬೆಳೆಗಳಲ್ಲಿಯೇ ಎರೆಹುಳುಗಳನ್ನು ಬಿಟ್ಟು ಎರೆಕೃಷಿ ಮಾಡಬಹುದು. ಈ ಪದ್ಧತಿಯು ಎಲ್ಲಾ ಬೆಳೆಗಳಿಗೂ ಸೂಕ್ತವಾಗಿಲ್ಲವಾದರೂ ಸಹ ಅನೇಕ ಬೆಳೆಗಳಲ್ಲಿ ಅಂದರೆ ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾವು ಮತ್ತು ಇತರೆ ಹನಿ ನೀರಾವರಿ ಅಳವಡಿಸುವ ಬೆಳೆಗಳಿಗೆ ಬಹಳ ಸೂಕ್ತವಾಗಿದೆ.

 

ಕಬ್ಬಿನ ಬೆಳೆಯಲ್ಲಿ ಸ್ಥಾನಿಕ ಎರೆ ಕೃಷಿ ಮಾಡುವ

            ಪದ್ಧತಿ!!

 

» ಕಬ್ಬು ಕಟಾವು ಮಾಡಿದ ತಕ್ಷಣ ಬಂದಂತಹ ರವದಿಯನ್ನು ಸುಡದೇ ಎರಡು ಸಾಲುಗಳ ಮಧ್ಯ ಹಾಕಬೇಕು.

» ನಂತರ ಕಬ್ಬಿನ ರವದಿಯ ಮೇಲೆ ತೆಳುವಾಗಿ ಮಣ್ಣನ್ನು ಅಥವಾ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.

» ಹನಿ ನೀರು ಅಥವಾ ತುಂತುರು ನೀರಾವರಿ ಮೂಲಕ ನೀರನ್ನು ಉಣಿಸಬೇಕು.

ಅಂದರೆ ಶೇಕಡಾ 40 ರಿಂದ 50 ರಷ್ಟು ತೇವಾಂಶ ಕಾಪಾಡಬೇಕು.

» ಸೂಕ್ತ ಜಾತಿಯ (ಯುಡ್ರೀಲಸ್ ಯುಜಿನೇ) ಎರೆಹುಳಗಳನ್ನು ಕಬ್ಬಿನ ಬೆಳೆಗೆ ಬಿಡಬೇಕು. ಒಂದು ಹೆಕ್ಟರ್‌ಗೆ ಸುಮಾರು 25 ಕೀ.ಗ್ರಾಂ ಎರೆಹುಳುಗಳನ್ನು ಬಿಡಬೇಕು.

» ಎರೆಹುಳುಗಳನ್ನು ಬಿಟ್ಟ ನಂತರ ಗೊಬ್ಬರ ತಯಾರಾಗಲು 3 ರಿಂದ 7 ತಿಂಗಳು ಬೇಕಾಗುತ್ತದೆ. ಈ ಹುಳುಗಳು ರವದಿಯನ್ನು ತಮ್ಮ ಆಹಾರವನ್ನಾಗಿಸಿಕೊಂಡು, ಅದನ್ನು ಬುಡದಿಂದ ತಿಂದು ಗೊಬ್ಬರವನ್ನಾಗಿ ಪರಿವರ್ತಿಸುತ್ತದೆ.

» ಈ ಗೊಬ್ಬರವು ಪೋಷಕಾಂಶಗಳಿಂದ ಕೂಡಿದ್ದು, ಇದು ಬೆಳೆಗಳಿಗೆ ನೇರವಾಗಿ ಸಿಗುತ್ತದೆ.

» ಈ ಪದ್ಧತಿಯು ಬೆಳೆಗಳಲ್ಲಿ ಮಾಡುವುದರಿಂದ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗುತ್ತದೆ.

» ಕಬ್ಬಿನ ಬೆಳೆಯಲ್ಲಿ ಅಧಿಕ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

» ಈ ಪದ್ಧತಿಯನ್ನು ಅಳವಡಿಸುವುದರಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹೆಚ್ಚಾಗಿ ಬಳಸಬಾರದು.

» ಕಬ್ಬಿನ ರವದಿಯನ್ನು ಹೊಲದಲ್ಲಿಯೇ ಹಾಕುವದರಿಂದ ಆಳುಗಳ ಕೊರತೆ ಮತ್ತು ಅದರ ವೆಚ್ಚ ಕಡಿಮೆಯಾಗುತ್ತದೆ.

 

# ಇತರೆ ಬೆಳೆಗಳಲ್ಲಿ ಸ್ಥಾನಿಕ ಎರೆಕೃಷಿ ಮಾಡುವ ಪದ್ಧತಿ (ಇನ್‌ ಸಿಟು ಎರೆ ಕೃಷಿ):

ಸ್ಥಾನಿಕ ಎರೆ ಕೃಷಿ ಎಂದರೆ ಬೆಳೆಯ ಬುಡದಲ್ಲಿ ಎರೆಹುಳುಗಳನ್ನು ಬಿಟ್ಟು ಪೋಷಕಾಂಶಗಳನ್ನು ಒದಗಿಸುವ ವಿಧಾನ. ಹೊಲಗಳ ಅಥವಾ ತೋಟಗಳ ಬೆಳೆಗಳಲ್ಲಿಯೇ ಎರೆ ಹುಳುಗಳನ್ನು ಬಿಟ್ಟು ಎರೆ ಕೃಷಿ ಮಾಡಬಹುದು. ಈ ಪದ್ಧತಿಯು ಎಲ್ಲಾ ಬೆಳೆಗಳಿಗೂ ಸೂಕ್ತವಾಗಿಲ್ಲವಾದರೂ, ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾವು ಮತ್ತು ಪೇರಲಾ. ಹನಿ ನೀರಾವರಿ ಅಳವಡಿಸುವ ಬಹುವಾರ್ಷಿಕ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಸಾವಯವ ಕಚ್ಚಾ ಅಥವಾ ಕೃಷಿ ತ್ಯಾಜ್ಯಗಳನ್ನು ಹಾಕಿ ಮೇಲೆ ಹುಲ್ಲು ಹಾಸಿಗೆ ಹೊದಿಸಿ ಎರೆಹುಳುಗಳನ್ನು ಬೆಳೆಯ ಪ್ರದೇಶದ ಎರಡು ಸಾಲುಗಳ ಮಧ್ಯೆ ಮತ್ತು ತೋಟದ ಬೆಳೆಗಳ ಗಿಡಗಳ ಬುಡಕ್ಕೆ ಬಿಟ್ಟು ಶೇಕಡಾ 40% ರಿಂದ 50%ರಷ್ಟು ತೇವಾಂಶವನ್ನು ಕಾಪಾಡುವುದರಿಂದ ಎರೆಹುಳುಗಳು ಸಾವಯವ ವಸ್ತುಗಳನ್ನು ಪದ್ಧತಿಯನ್ನು ಅಳವಡಿಸಿದಲ್ಲಿ ಶೇ.50 ರಷ್ಟು ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬಹುದು. ಹಾಗೂ ಅದೇ ರೀತಿಯಾಗಿ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

ರಾಸಾಯನಿಕ ಕೃಷಿಯಿಂದ ಪರಿಸರದ ಮೇಲೆ ವಿಪರೀತ ದುಷ್ಪರಿಣಾಮವಾಗಿ ನೆಲ, ಜಲ, ವಾಯು ಮತ್ತು ಆಹಾರ ಮಾಲಿನ್ಯವಾಗುತ್ತಿದೆ. ಈ ರೀತಿ ಪರಿಸರ ಮಾಲಿನ್ಯವು ಮಾನವನ ಹಸನಾದ ಬದುಕಿಗೆ ಮಾರಕವಾಗುತ್ತಿದೆ. ಕೀಟನಾಶಕಗಳ ಬಳಕೆಯಿಂದ ಬೆಳಗೆರೆಗೆ ಸಿಂಪರಿಸಿದ ರಾಸಾಯನಿಕಗಳಲ್ಲಿಯ ವಿಷವು ಬೆಳೆಗಳಲ್ಲಿ ಸೇರಿ ಮನುಷ್ಯನ ಸೇವಿಸುವ ಆಹಾರ ಮತ್ತು ನೀರಿನ ಮೂಲಕ ಶರೀರವನ್ನು ಸೇರಿ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ.

ಈ ಸ್ಥಾನಿಕ ಎರೆ ಕೃಷಿಯ ಬಗ್ಗೆ ಹೆಚ್ಚ್ಚಿನ ಮಾಹಿತಿಗಾಗಿ ನಿಮಗೆ ಹತ್ತಿರವಿರುವ ಕೃಷಿ ವಿದ್ಯಾಲಯಗಳನ್ನು ಅಥವಾ ಸಾವಯವ ಕೃಷಿಯನ್ನು ಮಾಡುತ್ತಿರುವ ರೈತರನ್ನು ಸಂಪರ್ಕಿಸಿ.

ರೈತರು ಮುಖ್ಯ ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೆ ಆಸಕ್ತಿ ತೋರಿಸಿ, ವರ್ಷವಿಡೀ ಆದಾಯ ಪಡೆಯಬಹುದು. ಹಾಗೂ ರೈತರು ಸ್ವಯಂ ಪ್ರೇರಿತವಾಗಿ ಕೃಷಿಯಲ್ಲಿ ತೊಡಗಿರುವ ಹಾಗೂ ಸ್ವಂತ ಉದ್ಯೋಗ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಕೃಷಿ ವೆಬ್ಸೈಟ್ನನ 🌱

ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *